Saturday, October 28, 2017

ಆವ ಪರಿಯಲಿ ನಿನ್ನನೊಲಿಸಿ ( ರಾಗ - ರೇಗುಪ್ತಿ, ತಾಳ - ತ್ರಿಪುಟ )


ಆವ ಪರಿಯಲಿ ನಿನ್ನನೊಲಿಸಿ ಮೆಚ್ಚಿಪ ವಿಧವು
ರವೆಯಷ್ಟು ತೋರದಲ್ಲ ||  ||

ದೇವ ದೇವೇಶ ನೀನೆಂದು ನಂಬಿರಲು ಕೃ
       ಪಾವಲೋಕನದಿ ಸಲಹೊ ದೇವ || . ||

ಫಣಿರಾಜನಾಸನದಿ ಕುಳಿತಿಹಗೆ ಅರಿವೆಯಾಸನವ ನಾನೆಂತ್ಹಾಸಲಿ
ಘನವಾದ ಗಂಗೆಯನು ಪಡೆದವಗೆ ಕಲಶ ನೀರನದೆಂತು ಮೈಗೆರೆಯಲಿ
ತನುವಿನ ಪರಿಮಳವು ಘಮಘಮಿಪನಿಗೆ ಸುಚಂದನವದೆಂತು ನಾ ಪೂಸಲಿ
ಅನವರತ ನಾಭಿಯೊಳು ಶತಪತ್ರವಿಹಗೆ ಮಿಕ್ಕಿನ ಪೂವ ಮುಡಿಸಲೆಂತೈ ದೇವ ||  ||

ಸುರುಚಿರೋಜ್ಜವಲ ಪೀತವಾಸನಿಗೆ ಉಡುಗೊರೆಯ ಅರಿವೆಯೇನನು ಪೊದಿಸಲಿ
ವರ ಕೌಸ್ತುಭವು ಕೊರಳೊಳಗೆ ಇಪ್ಪಗೆ ಆಭರಣವಾವುದ ತೊಡಿಸಲಿ
ತರಣಿ ಶತಕೋಟಿತೇಜನ ಮುಂದೆ ಹ್ಯಾಗೆ ನಾ ಪೆರತೊಂದು ದೀಪವಿಡಲಿ
ನೆರಹಿದ ಫಣಿಪತಿಯ ಸ್ತೋತ್ರದೂರನ ನಾನು ಸ್ಮರಿಪೆನೆಂತಯ್ಯ ದೇವ ದೇವ ||  ||

ವನಜಜಾಂಡ ಕೋಟಿಯುದರಂಗೆ ಆವುದನು ಉಣಿಸಿ ತೃಪ್ತಿಯ ಮಾಡಲಿ
ಅನಿಮಿಷರಿಗಮೃತವನ್ನೆರೆದವನ ತೃಷೆಯ ನೀರಿನೊಳೆಂತು ಸಂತವಿಡಲಿ
ವಿನತೆಯಾತ್ಮಜ ಪಕ್ಷದನಿಲನಿರೆ ಬೇರೆ ಬೀಸಣಿಗೆಯನ್ನೇಂ ಬೀಸಲಿ
ಅಣುರೇಣು ಪರಿಪೂರ್ಣ ಮೂರುತಿಗೆ ನಾ ಪ್ರದಕ್ಷಿಣೆಯಂತು ಸುತ್ತಿ ಬರಲಿ ದೇವ ||  ||

ಮಿಗೆ ಫಣಿಯ ಫಣದಾತಪತ್ರವಿರುವವಗೆ  ನೆರಳಿಗೆ ಕೊಡಯನೇಂ ಪಿಡಿಯಲಿ
ಪಗಲಿರುಳು ಸಾಮಗಾನಪ್ರಿಯನ ಗೀತಗಳ ನಾನೇಂ ಪಾಡಲಿ
ಜಗವರಿಯೆ ಲಕ್ಶ್ಮೀದೇವೀಪತಿಗೆ ಎಷ್ಟು ಹೊನ್ನುಗಳ ದಕ್ಷಣೆಯ ಕೊಡಲಿ
ನಿಗಮತತಿ ಕಾಣದ ಮಹಾಮಹಿಮನನು ನಮಿಪ ಬಗೆಯ ನಾನರಿವೆನೆಂತೈ ದೇವ ||  ||

ಒಲಿಸುವದನರಿಯೆ ಮೆಚ್ಚಿಸುವ ಬಗೆಯನರಿಯೆ ಹೊಗಳುವ ಹೊಲಬನ್ನರಿಯೆ
ತಿಳಿದುದಿಲ್ಲವು ಷೋಡಶೋಪಚಾರದ ಪೂಜೆಗಳಲೊಂದು ಪರಿಯಾದರೂ
ನೆಲೆಯ ಕಾಣೆನು ನಿಗಮಶಾಸ್ತ್ರ ನವವಿಧಭಕ್ತಿಯೊಳಗೊಂದು ಬಗೆಯಾದರೂ
ಅಳಿಲಸೇವೆಯನೊಪ್ಪಿಕೊಂಡು ಸಲಹೈ ಕಾಗಿನೆಲೆಯಾದಿಕೇಶವನೆ ಸ್ವಾಮೀ ಪ್ರೇಮಿ ||  ||


ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

ಆವ ಕರ್ಮವೋ ಇದು ಆವ ಧರ್ಮವೋ ( ರಾಗ - ಪಂತುರಾವಳಿ, ತಾಳ - ರೂಪಕ )


ಆವ ಕರ್ಮವೋ ಇದು ಆವ ಧರ್ಮವೋ
ಆವ ಕರ್ಮವೆಂದರಿಯೆಹಾರುವರಿವರು ಬಲ್ಲರೆ ||  ||

ಸತ್ತವನು ಎತ್ತ ಪೋದ
ಸತ್ತು ತನ್ನ ಜನ್ಮಕೆ ಪೋದ
ಸತ್ತವನು ಉಣ್ಣುವನೆಂದು
ನಿತ್ಯ ಪಿಂಡವಿಕ್ಕುತೀರಿ ||  ||

ಎಳ್ಳು ದರ್ಭೆ ಕೈಲಿ ಪಿಡಿದು
ಪಿತರ ತೃಪ್ತಿ ಪಡಿಸುತೀರಿ
ಎಳ್ಳು ಮೀನು ನುಂಗಿ ಹೋಯಿತು
ದರ್ಭೆ ನೀರೊಳು ಹರಿದು ಹೋಯಿತು ||  ||

ಎಡಕೆ ಒಂದು ಬಲಕೆ ಒಂದು
ಎಡಕೆ ತೋರಿಸಿ ಬಲಕೆ ತೋರಿಸಿ
ಕಡು ಧಾವಂತಪಡಿಸಿ
ಕಟಿಯ ಹಸ್ತದೊಳಗೆ ಪಿಡಿಸುತೀರಿ ||  || 

ಮಂತ್ರಾಕ್ಷತೆಯ ಕೈಗೆ ಕೊಟ್ಟು
ಮೋಕ್ಷವನ್ನು ಹಾರೈಸುವಿರಿ
ಮಂತ್ರವೆಲ್ಲೋ ಅಕ್ಷತೆಯೆಲ್ಲೊ
ಮೋಕ್ಷವೆಲ್ಲೋ ಮರ್ತ್ಯವೆಲ್ಲೊ ||  ||

ಹೇಳುವವನು ಅವಿವೇಕಿ
ಕೇಳುವವನು ಅಜ್ಞಾನಿ
ಹೇಳುವ ಕೇಳುವ ಇಬ್ಬರ ಸೊಲ್ಲ
ಆದಿಕೇಶವಮೂರ್ತಿ ಬಲ್ಲ ||  ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು