Saturday, October 28, 2017

ಆವ ಕರ್ಮವೋ ಇದು ಆವ ಧರ್ಮವೋ ( ರಾಗ - ಪಂತುರಾವಳಿ, ತಾಳ - ರೂಪಕ )


ಆವ ಕರ್ಮವೋ ಇದು ಆವ ಧರ್ಮವೋ
ಆವ ಕರ್ಮವೆಂದರಿಯೆಹಾರುವರಿವರು ಬಲ್ಲರೆ ||  ||

ಸತ್ತವನು ಎತ್ತ ಪೋದ
ಸತ್ತು ತನ್ನ ಜನ್ಮಕೆ ಪೋದ
ಸತ್ತವನು ಉಣ್ಣುವನೆಂದು
ನಿತ್ಯ ಪಿಂಡವಿಕ್ಕುತೀರಿ ||  ||

ಎಳ್ಳು ದರ್ಭೆ ಕೈಲಿ ಪಿಡಿದು
ಪಿತರ ತೃಪ್ತಿ ಪಡಿಸುತೀರಿ
ಎಳ್ಳು ಮೀನು ನುಂಗಿ ಹೋಯಿತು
ದರ್ಭೆ ನೀರೊಳು ಹರಿದು ಹೋಯಿತು ||  ||

ಎಡಕೆ ಒಂದು ಬಲಕೆ ಒಂದು
ಎಡಕೆ ತೋರಿಸಿ ಬಲಕೆ ತೋರಿಸಿ
ಕಡು ಧಾವಂತಪಡಿಸಿ
ಕಟಿಯ ಹಸ್ತದೊಳಗೆ ಪಿಡಿಸುತೀರಿ ||  || 

ಮಂತ್ರಾಕ್ಷತೆಯ ಕೈಗೆ ಕೊಟ್ಟು
ಮೋಕ್ಷವನ್ನು ಹಾರೈಸುವಿರಿ
ಮಂತ್ರವೆಲ್ಲೋ ಅಕ್ಷತೆಯೆಲ್ಲೊ
ಮೋಕ್ಷವೆಲ್ಲೋ ಮರ್ತ್ಯವೆಲ್ಲೊ ||  ||

ಹೇಳುವವನು ಅವಿವೇಕಿ
ಕೇಳುವವನು ಅಜ್ಞಾನಿ
ಹೇಳುವ ಕೇಳುವ ಇಬ್ಬರ ಸೊಲ್ಲ
ಆದಿಕೇಶವಮೂರ್ತಿ ಬಲ್ಲ ||  ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

No comments:

Post a Comment