Thursday, June 29, 2017

ಆನೆಯ ನೋಡಿರಯ್ಯ (ರಾಗ - ಕಲ್ಯಾಣಿ, ತಾಳ - ಅಟ)

ಆನೆಯ ನೋಡಿರಯ್ಯ ನೀವೆಲ್ಲರು
ಆನಂದ ಪಡೆಯಿರಯ್ಯ
ತಾನು ತನ್ನವರೆಂಬ ಮಾನವರ ಸಲಹಿದ

ಪಾಂಡು ಚಕ್ರೇಶನ ಸುತಗೆ ಒಲಿದಾನೆ
ಗಂಡುಗಲಿ ಮಾಗಧನ ಒರಸಿದಾನೆ
ಹಿಂಡು ಗೋವಳರೊಳು ಹಿರಿಯನ ಕಳೆಯದಾನೆ
ಲಂಡರಿಗೆ ಎದೆಗೊಡುವ ಪುಂಡ ಆನೆ || 1 ||

ಬಾಲಕನ ನುಡಿ ಕೇಳಿ ಖಳನ ಸೀಳಿದಾನೆ
ಪಾಲುಂಡು ವಿದುರನ ಸಲಹಿದಾನೆ
ಲೋಲಾಕ್ಷಿಯ ಮಾನಭಂಗಕ್ಕೊದಗಿದಾನೆ
ಖೂಳ ಶಿಶುಪಾಲನ ಸೀಳಿದಾನೆ || 2 ||

ಅಜಮಿಳಗೆ ನಿಜಪದವಿಯ ಕೊಟ್ಟಾನೆ
ಕುಜನರೆಲ್ಲರನು ವರ್ಜಿಸಿದಾನೆ
ಅಜಪಿತ ಕಾಗಿನೆಲೆಯಾದಿಕೇಶವನೆ
ತ್ರಿಜಗವಲ್ಲಭ ತಾನು ಭಜಕರ ವಶದಾನೆ || 3 ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

No comments:

Post a Comment