ಅಣುವಿಂಗೆ ಅಣುವು ಮಹತಿಂಗೆ ಮಹಿಮನು ಅಖಿಳ
ಗುಣಭರಿತ ಪರಮಪಾವನ ಚರಿತ ಎನ್ನ ನಿರಯಣ
ಸಮಯದಲ್ಲಿ ಶ್ರೀಹರಿ ಹರಿಯೆ ಎಂದೆಂಬ
ನೆನಹದೊಸಿದಿತ್ತು ಸಲಹೊ
ನೋಡಿ ನಡೆಯದೆ ಹಿಂದನೇಕ ಜನ್ಮಗಳಲ್ಲಿ
ಮಾಡಿರುವ ಪಾತಕವು ವ್ಯಾಧಿರೂಪಗಳಿಂದ
ಪೀಡಿಸುತ ತನುವ ತೊತ್ತುಳಿಗೈದು ನೆಲಕಿಕ್ಕಿ
ತೀಡಿ ಬಸವಳಿದ ಬಳಿಕ
ನಾಡಿಗಳು ಸ್ವಸ್ಥಾನದಾಸ್ಥಾನ ಛೇದಿಸಲು
ಓಡಿ ಕಂಠೋಪದಲಿ ಪ್ರಾಣ ನಿಲ್ಲದೆಯೆ
ಒದ್ದಾಡುತಿಹ ಸಮಯದಲಿ ಹರಿನಾಮವನು ಪಾಡಿ
ಪೊಗಳುವುದ ಕರುಣಿಸಯ್ಯ || 1 ||
ಕಂದ ಬಾರೆಂತೆಂದು ಶೋಕಿಪ ಜನಕ ಜನನಿ
ನಿಂದಳುತ ಜ್ಯೇಷ್ಠರು ಕನಿಷ್ಠ ಭ್ರಾತರು ಪುತ್ರ
ಬಂಧು ಮಿತ್ರರು ಬಹು ಪ್ರಳಾಪಮಂ ಗೈವ ಸತಿ
ಅಂದದಲ್ಲಹ ಮಂದಿರ
ಹೊಂದಿಪ್ಪ ಸಂಪತ್ತ ನೋಡಿ ಹಂಬಲಿಸುತಲಿ
ವೃಂದಾವನಪ್ರಿಯನೆ ನಿನ್ನ ಮರೆತಿದ್ದೆ ಗೋವಿಂದ
ವೈಕುಂಠವಿಭುವಿಂದು ತಾರಿಸುತ ಮು-
ಕುಂದ ಮುಕುತಯನೊದಗಿಸೈ || 2 ||
ಘಾತೀಸೀತನ ಹಿಡಿದು ಹೆಡಗಟ್ಟಿ ಪಂಚಮಹಾ-
ಪಾತಕನ ತೊಗಲನ್ನು ಸುಲಿದು ಸೀಳೆಂಬ ಯಮ-
ದೂತರುದ್ದತ ಕಣ್ಗಳನು ಕಂಡು ಮನದಲ್ಲಿ
ಭೀತಿಯಲಿ ಬಹಳ ಬಳಲಿ
ಚೇತನವು ಕುಂದಿ ನಾಲಗೆ ಬೀಳ್ವ ಸಮಯದಲಿ
ಏತರಾಸೆಯು ಬಾಡದಾದಿಕೇಶವನೇ ಅ-
ನಾಥ ಬಂಧುವೆ ಅಚ್ಯುತ ಮುರಾರಿ ಹರಿಯೆಂಬ
ಮಾತನಾಡಿಸಿ ಮುಕುತಿಯೊದಗಿಸಯ್ಯ || 3 ||
ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು
No comments:
Post a Comment