Wednesday, August 30, 2017

ಕೇಶವ ನಾಮ


ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು
ದೋಷರಾಶಿ ನಾಶ ಮಾಡು ಶ್ರೀಶ ಕೇಶವ || ||

ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ ನಿನ್ನ
ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ || ||

ಶೋಧಿಸೆನ್ನ ಭವದ ಕಲುಶ ಬೋಧಿಸಯ್ಯ ಜ್ಞಾನವೆನಗೆ
ಬಾಧಿಸುವ ಯಮನ ಬಾಧೆ ಬಿಡಿಸು ಮಾಧವ || ||

ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆನಯ್ಯ
ಇಂದು ಭವದ ಬಂಧ ಬಿಡಿಸು ತಂದೆ ಗೋವಿಂದಾ || ||

ಭ್ರಷ್ಟವೆನಿಸಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ
ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೇ || ||

ಮದನನಯ್ಯ ನಿನ್ನ ಮಹಿಮೆ ವದನದಲ್ಲಿ ನುಡುಯುವಂತೆ
ಹೃದಯದೊಳಗೆ ಹುದುಗಿಸಯ್ಯ ಮಧುಸೂದನಾ || ||

ಕವಿದುಕೊಂಡು ಇರುವ ಪಾಪ ಸವೆದುಪೋಗುವಂತೆ ಮಾಡೊ
ಜವನ ಬಾಧೆಯನ್ನ ಬಿಡಿಸು ಶ್ರೀ ತ್ರಿವಿಕ್ರಮಾ || ||

ಕಾಮಜನಕ ನಿನ್ನ ನಾಮ ಪ್ರೇಮದಿಂದ ಪಾಡುವಂತೆ
ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನಾ || ||

ಮೊದಲು ನಿನ್ನ ಪಾದಪೂಜೆ ಒದಗುವಂತೆ ಮಾಡೊ ಎನ್ನ
ಹೃದಯದಲ್ಲಿ ಸದನ ಮಾಡೊ ಮುದದಿ ಶ್ರೀಧರ || ||

ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದು
ಹುಸಿಗೆ ಹಾಕದೀರಯ್ಯಾ ಹೃಷೀಕೇಶನೇ || ೧೦ ||

ಬಿದ್ದು ಭವದನೇಕ ಜನುಮ ಬದ್ಧನಾಗಿ ಕಲುಶದಿಂದ
ಗೆದ್ದುಪೋಪ ಬುದ್ಧಿ ತೋರೊ ಪದ್ಮನಾಭನೇ || ೧೧ ||

ಕಾಮ ಕ್ರೋಧ ಬಿಡಿಸಿ ನಿನ್ನ ನಾಮ ಜಿಹ್ವೆಯೊಳಗೆ ನುಡಿಸೊ
ಶ್ರೀ ಮಹಾನುಭಾವನಾದ ದಾಮೋದರಾ || ೧೨ ||

ಪಂಕಜಾಕ್ಷ ನೀನು ಎನ್ನ ಮಂಕು ಬುದ್ಧಿಯನ್ನು ಬಿಡಿಸಿ
ಕಿಂಕರನ್ನ ಮಾಡಿಕೊಳ್ಳೊ ಸಂಕರುಷಣಾ || ೧೩ ||

ಏಸು ಜನುಮ ಬಂದರೇನು ದಾಸನಲ್ಲವೇನು ನಾನು
ಘಾಸಿ ಮಾಡದಿರು ಎನ್ನ ವಾಸುದೇವನೇ || ೧೪ ||

ಬುದ್ಧಿ ಶೂನ್ಯನಾಗಿ ಎನ್ನ ಬದ್ಧಕಾರ್ಯಕುಹಕ ಮನವ
ತಿದ್ದಿ ಹೃದಯ ಶುದ್ಧಿ ಮಾಡೊ ಪ್ರದ್ಯುಮ್ನನೇ || ೧೫ ||

ಜನನಿ ಜನಕ ನೀನೆ ಎಂದು ನೆನೆವೆನಯ್ಯ ದೀನಬಂಧು
ಎನಗೆ ಮುಕ್ತಿ ಪಾಲಿಸಯ್ಯ ಅನಿರುದ್ಧನೇ || ೧೬ ||

ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡು ನೇಮ
ವಿರಿಸು ಚರಣದಲ್ಲಿ ಪುರುಷೋತ್ತಮಾ || ೧೭ ||

ಸಾಧುಸಂಗ ಕೊಟ್ಟು ನಿನ್ನ ಪಾದಭಜನೆಯಿಟ್ಟು ಎನ್ನ
ಭೇದ ಮಾಡಿ ನೋಡದಿರೋ ಶ್ರೀ ಅಧೋಕ್ಷಜಾ || ೧೮ ||

ಚಾರು ಚರಣ ತೋರಿ ಎನಗೆ ಪಾರುಗಾಣಿಸಯ್ಯ ಕೊನೆಗೆ
ಭಾರ ಹಾಕುತಿರುವೆ ನಿನಗೆ ನಾರಸಿಂಹನೇ || ೧೯ ||

ಸಂಚಿತಾರ್ಥ ಪಾಪಗಳನು ಕಿಂಚಿತಾದ ಪೀಡೆಗಳನು
ಮುಂಚಿತವಾಗಿ ಕಳೆದು ಪೊರೆಯೊ ಸ್ವಾಮಿ ಅಚ್ಯುತಾ || ೨೦ ||

ಜ್ಞಾನ ಭಕ್ತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಸದಾ
ಹೀನ ಬುದ್ಧಿ ಬಿಡಿಸು ಮುನ್ನ ಶ್ರೀ ಜನಾರ್ಧನಾ || ೨೧ ||

ಜಪತಪನುಷ್ಟಾನವಿಲ್ಲದೆ ಕುಪಥಗಾಮಿಯಾದ ಎನ್ನ
ಕೃಪೆಯಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೇ || ೨೨ ||

ಮೊರೆಯ ಇಡುವೆನಯ್ಯ ನಿನಗೆ ಶರಧಿ ಶಯನ ಶುಭಮತಿಯ
ಇರಿಸು ಭಕ್ತನೆಂದು ಪರಮ ಪುರುಷ ಶ್ರೀ ಹರೀ || ೨೩ ||

ಪುಟ್ಟಿಸಲೇಬೇಡ ಇನ್ನು ಪುಟ್ಟಿಸಿದಕೆ ಪಾಲಿಸೆನ್ನ
ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ || ೨೪ ||

ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವವರ
ಅರ್ಥಿಯಿಂದ ಸಲಹುವನು ಕರ್ತೃ ಕೇಶವ || ೨೫ ||

ಮರೆಯದೆಲೆ ಹರಿಯ ನಾಮ ಬರೆದು ಓದಿ ಕೇಳಿದವಗೆ
ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವಾ || ೨೬ ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

ಶ್ರೀ ಶ್ರೀಪಾದರಾಜ ಪಂಚರತ್ನ ಮಾಲಿಕಾ ಸ್ತೊತ್ರ


ವಂದೇ ಶ್ರೀಪಾದರಾಜಂ ರುಚಿತಮಹೃದಯಂ ಪೂಜಿತಶ್ರೀಸಹಾಯಂ
ನಿರ್ಧೂತಾಶೇಷಹೇಯಂ ನಿಭೃತಶುಭಚಯಂ ಭೂಮಿದೇವಾಭಿಗೇಯಮ್ ||
ವಿಪ್ರೇಭ್ಯೋದತ್ತದೇಯಂ ನಿಜಜನಸದಯಂ ಖಂಡಿತಾಶೇಷಮಾಯಂ
ನಿಷ್ಟ್ಯೂತಸ್ವಣ೯ಕಾಯಂ ಬಹುಗುಣನಿಲಯಂ ವಾದಿಸಂಘೈರಜೇಯಮ್ || ||

ಕ್ಷಭ್ಧಾದ್ವಾದಿಕರೀಂದ್ರ ವಾದಿಪಟಲೀಕುಂಭಚ್ಛಟಾ ಭೇದನ
ಪ್ರೌಢಪ್ರಾಭವತರ್ಕಸಂಘನಿಖರಶ್ರೇಣೀವಿಲಾಸೋಜ್ಜ್ವಲಃ ||
ಗೋಪೀನಾಥಮಹೇಂದ್ರಶೇಖರಲಸತ್ಪಾದಸ್ಥಲಾವಾಸಕೃತ್
ಪಾಯಾನ್ಮಾಂ ಭವಘೋರಕುಂಜರ ಭಯಾಚ್ಛ್ರೀಪಾದರಾಟ್ ಕೇಸರೀ || ||

ಬಿಭ್ರಾಣಂ ಕ್ಷೌಮವಾಸಃ ಕರಧೃತವಲಯಂ ಹಾರಕೇಯೂರಕಂಚೀ
ಗ್ರೈವೇಯಸ್ವಣ೯ಮಾಲಾ ಮಣಿಗಣಖಚಿತಾನೇಕ ಭೂಷಾಪ್ರಕರ್ಷಮ್ ||
ಭುಂಜಾನಂ ಷಷ್ಠಿಶಾಕಂ ಹಯಗಜಶಿಭಿಕಾನರ್ಘ್ಯ ಶಯ್ಯಾರಥಾಢ್ಯಂ
ವಂದೇ ಶ್ರೀಪಾದರಾಜಂ ತ್ರಿಭುವನವಿದಿತಂ ಘೋರವಾದಿಪ್ರಶಾಂತ್ಯೈ || ||

ಯದ್ಬೃಂದಾವನಸೇವಯಾ ಸುವಿಮಲಾಂ ವಿದ್ಯಾಂ ಪಶೂನ್ ಸಂತತಿಂ
ಧ್ಯಾನಂ ಜ್ಞಾನಮನಲ್ಪಕೀರ್ತಿನಿವಹಂ ಪ್ರಾಪ್ನೋತಿ ಸೌಖ್ಯಂ ಜನಃ ||
ತಂ ವಂದೇ ನರಸಿಂಹತೀರ್ಥ ನಿಲಯಂ ಶ್ರೀ ವ್ಯಾಸರಾಟ್ ಪೂಜಿತಂ
ಧ್ಯಾಯಂತಂ ಮನಸಾ ನೃಸಿಂಹಚರಣಂ ಶ್ರೀಪಾದರಾಜಂ ಗುರುಂ || ||

ಕಾಶೀ ಕೇದಾರ ಮಾಯಾಕರಿಗಿರಿ ಮಧುರಾ ದ್ವಾರಕ ವೇಂಕಟಾದ್ರಿ
ಶ್ರೀಮುಷ್ಣಕ್ಷೇತ್ರಪೂರ್ವ ತ್ರಿಭುವನವಿಲಸತ್ಪುಣ್ಯಭೂಮಿನಿವಾಸಃ ||
ಗುಲ್ಮಾದಿವ್ಯಾಧಿಹರ್ತಾ ಗುರುಗುಣನಿಲಯೋ ಭೂತಭೇತಾಲಭೇದೀ
ಭೂಯಾಚ್ಛ್ರೀಪಾದರಾಜೋ ನಿಖಿಲ ಶುಭತತಿ ಪ್ರಾಪ್ತಯೇ ಸಂತತಂ ನಃ || ||

ಶ್ರೀವ್ಯಾಸರಾಜವಿರಚಿತಂ ಪಂಚರತ್ನ ಮಾಲಿಕಾ

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

Friday, August 25, 2017

ಅನುಗಾಲವು ಚಿಂತೆ ಜೀವಕೆ ( ರಾಗ - ಕಾನಡ, ತಾಳ - ಅಟ್ಟ )


ಅನುಗಾಲವು ಚಿಂತೆ ಜೀವಕೆ ತನ್ನ
ಮನವು ಶ್ರೀರಂಗನೊಳ್ ಮೆಚ್ಚುವ ತನಕ || ||

ಸತಿಯು ಇದ್ದರು ಚಂತೆ ಸತಿಯು ಇಲ್ಲದ ಚಿಂತೆ
ಮತಿಹೀನ ಸತಿಯಾದರೂ ಚಿಂತೆಯು
ಪೃಥವಿಯೊಳಗೆ ಸತಿ ಅತಿ ಚೆಲ್ವೆಯಾದರೆ
ಮಿತಿ ಮೇರೆಯಿಲ್ಲದ ಮೋಹದ ಚಿಂತೆ || ||

ಪುತ್ರರಿದ್ದರು ಚಿಂತೆ ಪುತ್ರರಿಲ್ಲದ ಚಿಂತೆ 
ಅತ್ತು ಅನ್ನಕೆ ಕಾಡುವ ಚಿಂತೆಯು
ತುತ್ತಿನ ಆಸೆಗೆ ತುರುಗಳ ಕಾಯ್ದರು
ಸುತ್ತೇಳು ಕಡೆಯಿಲ್ಲದ ಚಿಂತೆಯು || ||

ಬಡವನಾದರು ಚಿಂತೆ ಬಲಿದನಾದರು ಚಿಂತೆ
ಹಿಡಿ ಹೊನ್ನು ಕೈಯೊಳಿದ್ದರು ಚಿಂತೆಯು
ಪೊಡವಿಯೊಳಗೆ ಸಿರಿಪುರಂದರವಿಠಲನ
ಬಿಡದೆ ಧ್ಯಾನಿಸಿದರೆ ಚಿಂತೆ ನಿಶ್ಚಿಂತೆ || ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ (ರಾಗ - ಮೋಹನ, ತಾಳ - ಝಂಪೆ )


ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ
ಸುಜ್ಞಾನಿಗಳ ಕೂಡೆ ಜಗಳವೇ ಲೇಸು || ||

ಉಂಬುಡುವುದಕ್ಕಿರುವ ಅರಸನೋಲಗಕಿಂತ
ತುಂಬಿದೂರೊಳಗೆ ತಿರಿದುಂಬುವುದೆ ಲೇಸು
ಹಂಬಲಿಸಿ ಹಾಳು ಹರಟೆ ಹೊಡೆವುದಕಿಂತ
ನಂಬಿ ಹರಿದಾಸರೊಳು ಪೊಂದಿ ಹಾಡುವುದೆ ಲೇಸು || ||

ಒಡನೆ ಹಂಗಿಸುವವನ ಪಾಲೋಗರಕ್ಕಿಂತ
ಕುಡಿ ನೀರು ಕುಡಿದುಕೊಂಡಿಹುದೆ ಲೇಸು
ಬಿಡದೆ ಬಡಿದಾಡುವರ ನೆರೆಯಲ್ಲಿಹುದಕ್ಕಿಂತ
ಅಡವಿಯೊಳಗಜ್ಞಾತವಾಸವೇ ಲೇಸು || ||

ಮಸೆದು ಮತ್ಸರಿಪ ಸತಿಯೊಡನೆ ಸಂಸಾರಕ್ಕಿಂತ
ಹಸನಾದ ಹಾಳು ಗುಡಿಯೆ ಲೇಸು
ಬಿಸಜಾಕ್ಷ ಪುರಂದರವಿಟ್ಠಲನ ನೆನೆನೆನೆದು
ವಸುಧೆಯೊಳು ಚಿರಕಾಲವಿರುವುದೆ ಲೇಸು || ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

Sunday, August 13, 2017

ಆರೂ ಸಮಯಕ್ಕೊದಗಲಿಲ್ಲ ( ರಾಗ - ಮುಖಾರಿ, ತಾಳ - ಝಂಪೆ )

ಆರೂ ಸಮಯಕ್ಕೊದಗಲಿಲ್ಲ 
ಮೋರೆ ನೋಡುತ ಸುಮ್ಮನಿಹರೆಲ್ಲ ||  ||

ಮಗಳು ಮಹಲಕುಮಿ ಮೊಮ್ಮಗನು ಸರಸಿಜಭವನು
ಖಗರಾಜವಾಹನನು ತನ್ನಳಿಯನು
ಅಗಜನಂಬು ತನ್ನೊಡಲೊಳಿಂಬಿಟ್ಟು ಮೂ
ರ್ಬೊಗಸೆ ಮಾಡಿದ ಮುನಿಯ ಬಿಡಿಸಲಿಲ್ಲ ||  ||

ಶ್ರೀದೇವಿ ಭೂದೇವಿ ಮಾತೆಯರು ತಾವಿರಲು
ಯಾದವರಾಯ ಮೋಹದ ತಂದೆಯು
ವೇದಮುಖದಣ್ಣನಿರೆ ಉರಿನಯನದಿಂದ ಸ್ಮರ
ಬೂದಿಯಾಗುವಾಗ ಬಿಡಿಸಲಿಲ್ಲವೇಕೆ ? ||  ||

ಪಿತನು ಸಾಗರನು ಹಿತದಕ್ಕೆ ಶ್ರೀದೇವಿ
ಅತಿ ಬೀಗನಾದವ ನಾರಾಯಣ
ಜತೆ ಅಳಿಯರು ಬೊಮ್ಮ ಮನ್ಮಥರಿರಲಾಗಿ
ಕ್ಷತಿಯೊಳಗೆ ಶಶಿ ಕ್ಷೀಣವಾಗುವ ಸಮಯದಿ ||  ||

ತೆತ್ತೀಸಕೋಟಿ ದೇವರ್ಕಳು ತಾವಿರಲು
ಒತ್ತಿನಲಿ ಇಂದ್ರ ಉಪೇಂದ್ರರಿರಲು
ಮತ್ತೆ ಪಾರ್ವತಿ ಪುತ್ರ ವೀರೆಶ ದಕ್ಷನ
ನೆತ್ತಿ ಹರಿಗಡಿವಾಗ ನೋಡುತಿಹರೆಲ್ಲ ||  ||

ಇಂತಿಂಥ ದೊಡ್ಡವರು  ಪಾಡು ಪಡಲಾಗಿ
ಭ್ರಾಂತ ಜನರಿಗೆ ಪೇಳಲಿನ್ನೆಷ್ಟು
ಕಂತು ಪಿತ ಕಾಗಿನೆಲೆಯಾದಿಕೇಶವನ
ಸಂತೋಷದಲಿ ಪಾಡಿ ಸುಖಿಯಾಗೊ ಮನುಜ ||  ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

ಆರೂ ಸಂಗಡ ಬಾಹೋರಿಲ್ಲ ( ರಾಗ - ಮಧ್ಯಮಾವತಿ, ತಾಳ - ಅಟ )

ಆರೂ ಸಂಗಡ ಬಾಹೋರಿಲ್ಲ ಸಿರಿ 
ನಾರಾಯಣನ ಸ್ಮರಣೆ ನೆರೆ ಬಾಹೋದಲ್ಲದೆ ||  ||

ಹೊತ್ತು ನವಮಾಸಪರ್ಯಂತ ಗರ್ಭದೊಳು
ಅತ್ಯಂತ ನೋವು ಬೇನೆಗಳಿಂದಲಿ
ಹೆತ್ತು ತುಪ್ಪವನಿಕ್ಕಿ ಸಲಹಿದ ತಾಯ್ತಂದೆ
ಅತ್ತು ಕರೆದುಳಿವರು ಮತ್ತೆ ಬೆನ್ನಲಿ ಬಾಹರೆ ? ||  ||

ಮನೆಮಕ್ಕಳಿವರೆನ್ನ ತನುವಿಗೊಡೆಯರೆಂದು
ಘನವಾಗಿ ಬಲುನಂಬಿ ನೆಚ್ಚುತಿಹರು
ಅನುಮಾನವಾಗಿ ಜೀವನು ತೊಲಗಿದಾಕ್ಷಣದಿ
ಮನೆಯೊಳೊಂದರೆಗಳಿಗೆ ನಿಲ್ಲಿಸಿಕೊಳ್ಳರೊ ||  ||

ಸುತ್ತಮುತ್ತಲು ಕುಳಿತಿದ್ದ ಬಂಧು ಜನರು
ಹೊತ್ತುಹೋಯಿತೇಳಿರೇಳೆಂಬರು
ಒತ್ತಿದ ಕಸಕಿಂತ ಕಡುಕಷ್ಟದೀ ದೇಹ
ಹೊತ್ತೊಯ್ದು ಅಗ್ನಿಯೊಳು ಬಿಸುಟಿಬಾಹರೊ ||  ||

ಧರೆಮಿತ್ರ ಬುಧಜನರ ಅಗ್ನಿಸಾಕ್ಷಿಯ ಮಾಡಿ
ಕರವಿಡಿದು ಧಾರೆಯನೆರೆಸಿಕೊಂಡ
ತರುಣಿ ತನ್ನಿನಿಯನ ಮುಟ್ಟಲಂಜಿ ದೂರದಲಿ
ಪೊರೆವರು ತನಗಾರು ಪೇಳೆಂಬಳು ||  ||

ಹರಣ ಹಿಂಗದ ಮುನ್ನ ಹರಿಯ ಸೇವೆಯ ಮಾಡು
ಪರಲೋಕಸಾಧನವನು ಮಾಡು
ಕರುಣಿ ಕೃಪಾಳು ಕಾಗಿನೆಲೆಯಾದಿಕೇಶವನ
ಚರಣಕಮಲವ ನಂಬಿ ಸುಖಿಯಾಗು ಮನವೆ ||  ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

ಆರು ಹಿತವರು ಎಂದು ನಂಬಬೇಡ ( ರಾಗ - ಕಾಂಬೋದಿ, ತಾಳ - ಝಂಪೆ )

ಆರು ಹಿತವರು ಎಂದು ನಂಬಬೇಡ ||  ||
ಆರಿಗಾರಿಲ್ಲ ಆಪತ್ತು ಬಂದೊದಗಿದಡೆ || . ||

ಜನಕ ಹಿತವೆಂದು ನಂಬಬಹುದೇ ಹಿಂದೆ
ತನಯ ಪ್ರಹ್ಲಾದನಿಗೆ ಪಿತ ಮುನಿದನು
ಜನನಿ ರಕ್ಷಿಪಳೆಂತೆಂಬೆನೇ  ಕುಂತಿ
ತನಯ ರಾಧೇಯನಿಗೆ ಎರಡೆಣಿಸಿದ ಮೇಲೆ ||  ||

ಮಗನು ತೆತ್ತಿಗನೆನಲೆ ಕಂಸ ತನ್ನಯ ಪಿತನ
ನಿಗಳ ಬಂಧನದಿಂದ ಬಂಧಿಸಿದನು
ಜಗವರಿಯೆ ಸೋದರನು ಮಮತೆಯುಳ್ಳವನೆನಲೆ
ಹಗೆವೆರಸಿ ವಾಲಿಯನು ಅನುಜ ಕೊಲಿಸಿದ ಮೇಲೆ ||  ||

ತನಗೆ ದೇಹಾನುಬಂಧುಗಳೆ ಬಂಧುಗಳೆಂದು
ಮನದಿ ನಿಚ್ಚಳವಾಗಿ ನಂಬಬೇಡ
ಘನಕೃಪಾನಿಧಿ ಕಾಗಿನೆಲೆಯಾದಿಕೇಶವನ
ಅನುದಿನ ನಂಬಿದವಗಿಹಪರದಿ ಸುಖವು ||  ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

ಸಂಜೀವನ ಗಿರಿಧರ ಪಾಹಿಮಾಂ

ಸಂಜೀವನ ಗಿರಿಧರ ಪಾಹಿಮಾಂ || ಪಾ ||

ಚಕ್ರತೀರ್ಥನಿವಾಸ ಶಕ್ರಾಧ್ಯಮರಾಧೀಶ
ವಕ್ರಾಸನ ಮೂರುತಿ ಪಾಹಿಮಾಂ ||  ||

ಮಂತ್ರ ಮೂಲಸ್ಥತ ಕಂತು ಪಿತನ ದೂತ
ಯಂತ್ರೋದ್ಧಾರಕ ಪಾಹಿಮಾಂ ||  ||

ಮೋಹನವಿಠಲದಾಸ ಪೋಶಕ
ಮಾಯಾ ಮೋಹ ಭಂಜಕ ಪಾಹಿಮಾಂ ||  ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

Saturday, August 5, 2017

ಆರು ಬಾಳಿದರೇನು ಆರು ಬದುಕಿದರೇನು ( ರಾಗ - ಮೋಹನ, ತಾಳ - ಅಟ )


ಆರು ಬಾಳಿದರೇನು ಆರು ಬದುಕಿದರೇನು
ನಾರಾಯಣನ ಸ್ಮರಣೆ ನಮಗಿಲ್ಲದನಕ || ||

ಉಣ್ಣ ಬರದವರಲ್ಲಿ ಊರೂಟವಾದರೆ ಏನು
ಹಣ್ಣು ಬಿಡದ ಮರಗಳು ಹಾಳಾದರೇನು
ಕಣ್ಣಿಲ್ಲದವಗಿನ್ನು ಕನ್ನಡಿಯಿದ್ದು ಫಲವೇನು
ಪುಣ್ಯವಿಲ್ಲದವನ ಪ್ರೌಢಿಮೆ ಮೆರೆದರೇನು ? || ||

ಅಕ್ಕರಿಲ್ಲದವಗೆ ಮ್ಕಳಿದ್ದು ಫಲವೇನು
ಹೊಕ್ಕು ನಡೆಯದ ನಂಟತನದೊಳೇನು
ರೊಕ್ಕವಿಲ್ಲದವಗೆ ಬಂಧುಗಳು ಇದ್ದರೇನು
ಮರ್ಕಟನ ಕೈಯೊಳಗೆ ಮಾಣಿಕ್ಯವಿದ್ದರೇನು ? || ||

ಅಲ್ಪದೊರೆಗಳ ಜೀತ ಎಷ್ಟು ಮಾಡಿದರೇನು
ಬಲ್ಪಂಥವಿಲ್ಲದವನ ಬಾಳ್ವೆಯೇನು
ಕಲ್ಪಕಲ್ಪಿತ ಕಾಗಿನೆಲೆಯಾದಿಕೇಶವನ
ಸ್ವಲ್ಪವೂ ನೆನೆಯದ ನರನಿದ್ದರೇನು ? || ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

ಆರು ಬಲ್ಲರು ಹರಿ ಹರರ ಮಹಿಮೆಯನು ( ರಾಗ - ಕಾಂಬೋಧಿ, ತಾಳ - ಝಂಪೆ )


ಆರು ಬಲ್ಲರು ಹರಿ ಹರರ ಮಹಿಮೆಯನು
ವಾರಿಜೋದ್ಭವ ಸುರೇಂದ್ರಾದಿಗಳಿಗಳವಲ್ಲ || ||

ಪೌರತ್ರಯ ಗೆಲುವ ಸಮಯದಲಿ ತಪವಮಾಡಿ
ನಾರಾಯಣಾಸ್ತ್ರವನು ಪಡೆದನೀಶ
ಗೌರೀಮನೋಹರನ ಘನತರಾರ್ಚನೆಗೈದು
ಚಾರುತರ ಚಕ್ರವನು ಪಡೆದನಾ ಶೌರಿ || ||

ಬಲಿ ಚಕ್ರವರ್ತಿ ಭಕ್ತಿಗೆ ಮೆಚ್ಚಿ ಅವನ ಬಾ-
ಗಿಲಕಾಯ್ದನಚ್ಯುತನು ಅನುಗಾಲದಿ
ಬಲುಭುಜನ ಬಾಣಾಸುರನ ಗೃಹದ್ವಾರವನು
ಬಳಸಿ ಕಾಯ್ದನು ಹರನು ವರವ ತಾನಿತ್ತು || ||

ಭೋಗಿಶಯನನು ಆಗಿ ಭೋಗಿಭೂಷಣನಾಗಿ
ವಾಗೀಶನಾಗಿ ಸೃ್ಷ್ಠಿ ಸ್ಥತಿ ಲಯಗಳಿಂಗೆ
ಆಗು ಕಾರಣ ಕಾರ್ಯ ಕರ್ಮಾದಿ ರೂಪಕ್ಕೆ
ಕಾಗಿನೆಲೆಯಾದಿಕೇಶವನ ಮಹಿಮೆಯನು || ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

ಆರಿಗಿಲ್ಲ ಆಪತ್ಕಾಲದೊಳಗೆ ( ರಾಗ - ಕಾಂಬೋಧಿ, ತಾಳ - ಝಂಪೆ )


ಆರಿಗಿಲ್ಲ ಆಪತ್ಕಾಲದೊಳಗೆ || ||
ವಾರಿಜಾಕ್ಷನ ನಾಮ ನೆನೆ ಕಂಡ್ಯ ಮನವೆ || . ||

ಹಸಿದು ಬಳಲುವಾಗ ಹಗೆ ಕೈಗೆ ಸಿಲುಕಿದಾಗ
ದೆಸೆಗೆಟ್ಟು ಅಧಿಕ ವ್ಯಾಧಿಯಲಿ ಇರುವಾಗ
ಅಸಮಾನನಾದಾಗ ಅತಿ ಭೀತಿಗೊಂಡಾಗ
ಬಿಸಜನಾಭನ ನಾಮ ನೆನೆಕಂಡ್ಯ ಮನವೆ || ||

ಸಾಲದವರೆಳೆವಾಗ ಚಾಡಿ ಮಾತಿಗೆ ಭೂಪ
ಘುಳುಘುಳಿಸುತ ಕೋಪವನ್ನು ತೋರಿದಾಗ
ಮೇಲು ತಾನರಿಯದಯೆ ನಿಂದೆ ಹೊಂದಿರುವಾಗ
ನೀಲಮೇಘಶ್ಯಾಮನ ನೆನೆಕಂಡ್ಯ ಮನವೆ || ||

ಪಂಥದಲಿರುವಾಗ ಪದವಿ ತಪ್ಪಿರುವಾಗ
ದಂತಿ ಮದವೇರಿ ಬೆನ್ಹತ್ತಿದಾಗ
ಕಂತುಪಿತಕಾಗಿನೆಲೆಯಾದಿಕೇಶವ ನಿ
ಶ್ಚಿಂತೆಯಿಂದಲಿ ನೀನು ನೆನೆಕಂಡ್ಯ ಮನವೆ || ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು