ಆರೂ ಸಂಗಡ ಬಾಹೋರಿಲ್ಲ ಸಿರಿ
ನಾರಾಯಣನ ಸ್ಮರಣೆ ನೆರೆ ಬಾಹೋದಲ್ಲದೆ
|| ಪ ||
ಹೊತ್ತು ನವಮಾಸಪರ್ಯಂತ ಗರ್ಭದೊಳು
ಅತ್ಯಂತ ನೋವು ಬೇನೆಗಳಿಂದಲಿ
ಹೆತ್ತು ತುಪ್ಪವನಿಕ್ಕಿ ಸಲಹಿದ ತಾಯ್ತಂದೆ
ಅತ್ತು ಕರೆದುಳಿವರು ಮತ್ತೆ ಬೆನ್ನಲಿ ಬಾಹರೆ ?
|| ೧ ||
ಮನೆಮಕ್ಕಳಿವರೆನ್ನ ತನುವಿಗೊಡೆಯರೆಂದು
ಘನವಾಗಿ ಬಲುನಂಬಿ ನೆಚ್ಚುತಿಹರು
ಅನುಮಾನವಾಗಿ ಜೀವನು ತೊಲಗಿದಾಕ್ಷಣದಿ
ಮನೆಯೊಳೊಂದರೆಗಳಿಗೆ ನಿಲ್ಲಿಸಿಕೊಳ್ಳರೊ
|| ೨ ||
ಸುತ್ತಮುತ್ತಲು ಕುಳಿತಿದ್ದ ಬಂಧು ಜನರು
ಹೊತ್ತುಹೋಯಿತೇಳಿರೇಳೆಂಬರು
ಒತ್ತಿದ ಕಸಕಿಂತ ಕಡುಕಷ್ಟದೀ ದೇಹ
ಹೊತ್ತೊಯ್ದು ಅಗ್ನಿಯೊಳು ಬಿಸುಟಿಬಾಹರೊ
|| ೩ ||
ಧರೆಮಿತ್ರ ಬುಧಜನರ ಅಗ್ನಿಸಾಕ್ಷಿಯ ಮಾಡಿ
ಕರವಿಡಿದು ಧಾರೆಯನೆರೆಸಿಕೊಂಡ
ತರುಣಿ ತನ್ನಿನಿಯನ ಮುಟ್ಟಲಂಜಿ ದೂರದಲಿ
ಪೊರೆವರು ತನಗಾರು ಪೇಳೆಂಬಳು
|| ೪ ||
ಹರಣ ಹಿಂಗದ ಮುನ್ನ ಹರಿಯ ಸೇವೆಯ ಮಾಡು
ಪರಲೋಕಸಾಧನವನು ಮಾಡು
ಕರುಣಿ ಕೃಪಾಳು ಕಾಗಿನೆಲೆಯಾದಿಕೇಶವನ
ಚರಣಕಮಲವ ನಂಬಿ ಸುಖಿಯಾಗು ಮನವೆ
|| ೫ ||
ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು
No comments:
Post a Comment