ಆರು ಹಿತವರು ಎಂದು ನಂಬಬೇಡ
|| ಪ ||
ಆರಿಗಾರಿಲ್ಲ ಆಪತ್ತು ಬಂದೊದಗಿದಡೆ
|| ಅ.ಪ ||
ಜನಕ ಹಿತವೆಂದು ನಂಬಬಹುದೇ ಹಿಂದೆ
ತನಯ ಪ್ರಹ್ಲಾದನಿಗೆ ಪಿತ ಮುನಿದನು
ಜನನಿ ರಕ್ಷಿಪಳೆಂತೆಂಬೆನೇ ಆ ಕುಂತಿ
ತನಯ ರಾಧೇಯನಿಗೆ ಎರಡೆಣಿಸಿದ ಮೇಲೆ
|| ೧ ||
ಮಗನು ತೆತ್ತಿಗನೆನಲೆ ಕಂಸ ತನ್ನಯ ಪಿತನ
ನಿಗಳ ಬಂಧನದಿಂದ ಬಂಧಿಸಿದನು
ಜಗವರಿಯೆ ಸೋದರನು ಮಮತೆಯುಳ್ಳವನೆನಲೆ
ಹಗೆವೆರಸಿ ವಾಲಿಯನು ಅನುಜ ಕೊಲಿಸಿದ ಮೇಲೆ
|| ೨ ||
ತನಗೆ ದೇಹಾನುಬಂಧುಗಳೆ ಬಂಧುಗಳೆಂದು
ಮನದಿ ನಿಚ್ಚಳವಾಗಿ ನಂಬಬೇಡ
ಘನಕೃಪಾನಿಧಿ ಕಾಗಿನೆಲೆಯಾದಿಕೇಶವನ
ಅನುದಿನ ನಂಬಿದವಗಿಹಪರದಿ ಸುಖವು
|| ೩ ||
ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು
No comments:
Post a Comment