ಆರೂ ಸಮಯಕ್ಕೊದಗಲಿಲ್ಲ
ಮೋರೆ ನೋಡುತ ಸುಮ್ಮನಿಹರೆಲ್ಲ
|| ಪ ||
ಮಗಳು ಮಹಲಕುಮಿ ಮೊಮ್ಮಗನು ಸರಸಿಜಭವನು
ಖಗರಾಜವಾಹನನು ತನ್ನಳಿಯನು
ಅಗಜನಂಬು ತನ್ನೊಡಲೊಳಿಂಬಿಟ್ಟು ಮೂ
ರ್ಬೊಗಸೆ ಮಾಡಿದ ಮುನಿಯ ಬಿಡಿಸಲಿಲ್ಲ
|| ೧ ||
ಶ್ರೀದೇವಿ ಭೂದೇವಿ ಮಾತೆಯರು ತಾವಿರಲು
ಯಾದವರಾಯ ಮೋಹದ ತಂದೆಯು
ವೇದಮುಖದಣ್ಣನಿರೆ ಉರಿನಯನದಿಂದ ಸ್ಮರ
ಬೂದಿಯಾಗುವಾಗ ಬಿಡಿಸಲಿಲ್ಲವೇಕೆ
? || ೨ ||
ಪಿತನು ಸಾಗರನು ಹಿತದಕ್ಕೆ ಶ್ರೀದೇವಿ
ಅತಿ ಬೀಗನಾದವ ನಾರಾಯಣ
ಜತೆ ಅಳಿಯರು ಬೊಮ್ಮ ಮನ್ಮಥರಿರಲಾಗಿ
ಕ್ಷತಿಯೊಳಗೆ ಶಶಿ ಕ್ಷೀಣವಾಗುವ ಸಮಯದಿ
|| ೩ ||
ತೆತ್ತೀಸಕೋಟಿ ದೇವರ್ಕಳು ತಾವಿರಲು
ಒತ್ತಿನಲಿ ಇಂದ್ರ ಉಪೇಂದ್ರರಿರಲು
ಮತ್ತೆ ಪಾರ್ವತಿ ಪುತ್ರ ವೀರೆಶ ದಕ್ಷನ
ನೆತ್ತಿ ಹರಿಗಡಿವಾಗ ನೋಡುತಿಹರೆಲ್ಲ
|| ೪ ||
ಇಂತಿಂಥ ದೊಡ್ಡವರು ಈ ಪಾಡು ಪಡಲಾಗಿ
ಭ್ರಾಂತ ಜನರಿಗೆ ಪೇಳಲಿನ್ನೆಷ್ಟು
ಕಂತು ಪಿತ ಕಾಗಿನೆಲೆಯಾದಿಕೇಶವನ
ಸಂತೋಷದಲಿ ಪಾಡಿ ಸುಖಿಯಾಗೊ ಮನುಜ
|| ೫ ||
ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು
No comments:
Post a Comment