Friday, August 25, 2017

ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ (ರಾಗ - ಮೋಹನ, ತಾಳ - ಝಂಪೆ )


ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ
ಸುಜ್ಞಾನಿಗಳ ಕೂಡೆ ಜಗಳವೇ ಲೇಸು || ||

ಉಂಬುಡುವುದಕ್ಕಿರುವ ಅರಸನೋಲಗಕಿಂತ
ತುಂಬಿದೂರೊಳಗೆ ತಿರಿದುಂಬುವುದೆ ಲೇಸು
ಹಂಬಲಿಸಿ ಹಾಳು ಹರಟೆ ಹೊಡೆವುದಕಿಂತ
ನಂಬಿ ಹರಿದಾಸರೊಳು ಪೊಂದಿ ಹಾಡುವುದೆ ಲೇಸು || ||

ಒಡನೆ ಹಂಗಿಸುವವನ ಪಾಲೋಗರಕ್ಕಿಂತ
ಕುಡಿ ನೀರು ಕುಡಿದುಕೊಂಡಿಹುದೆ ಲೇಸು
ಬಿಡದೆ ಬಡಿದಾಡುವರ ನೆರೆಯಲ್ಲಿಹುದಕ್ಕಿಂತ
ಅಡವಿಯೊಳಗಜ್ಞಾತವಾಸವೇ ಲೇಸು || ||

ಮಸೆದು ಮತ್ಸರಿಪ ಸತಿಯೊಡನೆ ಸಂಸಾರಕ್ಕಿಂತ
ಹಸನಾದ ಹಾಳು ಗುಡಿಯೆ ಲೇಸು
ಬಿಸಜಾಕ್ಷ ಪುರಂದರವಿಟ್ಠಲನ ನೆನೆನೆನೆದು
ವಸುಧೆಯೊಳು ಚಿರಕಾಲವಿರುವುದೆ ಲೇಸು || ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

No comments:

Post a Comment