ಆವ ಪರಿಯಲಿ ನಿನ್ನನೊಲಿಸಿ ಮೆಚ್ಚಿಪ ವಿಧವು
ರವೆಯಷ್ಟು ತೋರದಲ್ಲ
|| ಪ ||
ದೇವ ದೇವೇಶ ನೀನೆಂದು ನಂಬಿರಲು ಕೃ
ಪಾವಲೋಕನದಿ ಸಲಹೊ ದೇವ || ಅ.ಪ ||
ಫಣಿರಾಜನಾಸನದಿ ಕುಳಿತಿಹಗೆ ಅರಿವೆಯಾಸನವ ನಾನೆಂತ್ಹಾಸಲಿ
ಘನವಾದ ಗಂಗೆಯನು ಪಡೆದವಗೆ ಕಲಶ ನೀರನದೆಂತು ಮೈಗೆರೆಯಲಿ
ತನುವಿನ ಪರಿಮಳವು ಘಮಘಮಿಪನಿಗೆ ಸುಚಂದನವದೆಂತು ನಾ ಪೂಸಲಿ
ಅನವರತ ನಾಭಿಯೊಳು ಶತಪತ್ರವಿಹಗೆ ಮಿಕ್ಕಿನ ಪೂವ ಮುಡಿಸಲೆಂತೈ ದೇವ || ೧ ||
ಸುರುಚಿರೋಜ್ಜವಲ ಪೀತವಾಸನಿಗೆ ಉಡುಗೊರೆಯ ಅರಿವೆಯೇನನು ಪೊದಿಸಲಿ
ವರ ಕೌಸ್ತುಭವು ಕೊರಳೊಳಗೆ ಇಪ್ಪಗೆ ಆಭರಣವಾವುದ ತೊಡಿಸಲಿ
ತರಣಿ ಶತಕೋಟಿತೇಜನ ಮುಂದೆ ಹ್ಯಾಗೆ ನಾ ಪೆರತೊಂದು ದೀಪವಿಡಲಿ
ನೆರಹಿದ ಫಣಿಪತಿಯ ಸ್ತೋತ್ರದೂರನ ನಾನು ಸ್ಮರಿಪೆನೆಂತಯ್ಯ ದೇವ ದೇವ || ೨ ||
ವನಜಜಾಂಡ ಕೋಟಿಯುದರಂಗೆ ಆವುದನು ಉಣಿಸಿ ತೃಪ್ತಿಯ ಮಾಡಲಿ
ಅನಿಮಿಷರಿಗಮೃತವನ್ನೆರೆದವನ ತೃಷೆಯ ನೀರಿನೊಳೆಂತು ಸಂತವಿಡಲಿ
ವಿನತೆಯಾತ್ಮಜ ಪಕ್ಷದನಿಲನಿರೆ ಬೇರೆ ಬೀಸಣಿಗೆಯನ್ನೇಂ ಬೀಸಲಿ
ಅಣುರೇಣು ಪರಿಪೂರ್ಣ ಮೂರುತಿಗೆ ನಾ ಪ್ರದಕ್ಷಿಣೆಯಂತು ಸುತ್ತಿ ಬರಲಿ ದೇವ || ೩ ||
ಮಿಗೆ ಫಣಿಯ ಫಣದಾತಪತ್ರವಿರುವವಗೆ ನೆರಳಿಗೆ ಕೊಡಯನೇಂ ಪಿಡಿಯಲಿ
ಪಗಲಿರುಳು ಸಾಮಗಾನಪ್ರಿಯನ ಗೀತಗಳ ನಾನೇಂ ಪಾಡಲಿ
ಜಗವರಿಯೆ ಲಕ್ಶ್ಮೀದೇವೀಪತಿಗೆ ಎಷ್ಟು ಹೊನ್ನುಗಳ ದಕ್ಷಣೆಯ ಕೊಡಲಿ
ನಿಗಮತತಿ ಕಾಣದ ಮಹಾಮಹಿಮನನು ನಮಿಪ ಬಗೆಯ ನಾನರಿವೆನೆಂತೈ ದೇವ || ೪ ||
ಒಲಿಸುವದನರಿಯೆ ಮೆಚ್ಚಿಸುವ ಬಗೆಯನರಿಯೆ ಹೊಗಳುವ ಹೊಲಬನ್ನರಿಯೆ
ತಿಳಿದುದಿಲ್ಲವು ಷೋಡಶೋಪಚಾರದ ಪೂಜೆಗಳಲೊಂದು ಪರಿಯಾದರೂ
ನೆಲೆಯ ಕಾಣೆನು ನಿಗಮಶಾಸ್ತ್ರ ನವವಿಧಭಕ್ತಿಯೊಳಗೊಂದು ಬಗೆಯಾದರೂ
ಅಳಿಲಸೇವೆಯನೊಪ್ಪಿಕೊಂಡು ಸಲಹೈ ಕಾಗಿನೆಲೆಯಾದಿಕೇಶವನೆ ಸ್ವಾಮೀ ಪ್ರೇಮಿ || ೫ ||
ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು