Sunday, July 30, 2017

ಅಂಬೆಗಾಲಿಕ್ಕುತಲಿ ಬಂದ ಗೋವಿಂದ ( ರಾಗ - ಧನ್ಯಾಸಿ, ತಾಳ - ಅಟ್ಟ )

ಅಂಬೆಗಾಲಿಕ್ಕುತಲಿ ಬಂದ ಗೋವಿಂದ ||  || 
ಅಂಬುಜನಾಭ ದಯದಿಂದೆನ್ನ ಮನೆಗೆ || . ||

ಜಲಚರ ಜಲವಾಸ ಧರಣಿಧರ ಮೃಗರೂಪ
ನೆಲನಳೆದು ಮೂರಡಿಯ ಮಾಡಿ ಬಂದ
ಕುಲನಾಶ ವನವಾಸ ನವನೀತ ಚೋರನಿವ
ಲಲನೆಯರ ವೃತಭಂಗ ಪಾವನತುರಂಗ ||  ||

ಕಣ್ಣ ಬಿಡುವನು ತನ್ನ ಬೆನ್ನ ತಗ್ಗಿಸುವ
ಮಣ್ಣ ಕೆದರಿ ಕೋರೆ ಬಾಯನ್ನ ತೆರೆದು
ಚಿಣ್ಣ ಭಾರ್ಗವ ಲಕ್ಷ್ಮಣನಣ್ಣ ಬೆಣ್ಣೆಯ ಕಳ್ಳ
ಮಾನವ ಬಿಟ್ಟು ಕುದುರೆಯನೇರಿದ ||  ||

ನೀರ ಪೊಕ್ಕನು ಗಿರಿಯ ನೆಗಹಿ ಧರಣಿಯ ತಂದು 
ನರಮೃಗ ಬಲಿಬಂಧ ಕೊರಳಗೊಯಿಕ
ಶರಮುರಿದೊರಳೆಳೆದು ನಿರ್ವಾಣಿ ಹಯ ಹತ್ತಿ
ಪುರಂದರವಿಠಲನು ಮನೆಗೆ ತಾ ಬಂದ ||  ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

ಅಂಬಿಗ ನಾ ನಿನ್ನ ನಂಬಿದೆ ( ರಾಗ -ಶಂಕರಾಭರಣ, ತಾಳ - ಅಟ್ಟ )

ಅಂಬಿಗ ನಾ ನಿನ್ನ ನಂಬಿದೆ ಜಗ-
ದಂಬಾರಮಣ ನಿನ್ನ ನಂಬಿದೆ || ||

ತುಂಬಿದ ಹರಿಗೋಲಂಬಿಗ ಅದ-
ಕೊಂಬತ್ತು ಛಿದ್ರ ನೋಡಂಬಿಗ
ಸಂಭ್ರಮದಿಂದ ನೀನಂಬಿಗ ಅದ-
ರಿಂಬು ನೋಡಿ ನಡೆಸಂಬಿಗ ||  ||

ಹೊಳೆಯ ಅಬ್ಬರ ನೋಡಂಬಿಗ ಅದಕೆ
ಸೆಳೆವು ಘನವಯ್ಯ ಅಂಬಿಗ
ಸುಳಿಯೊಳು ಮುಳುಗಿದೆ ಅಂಬಿಗ ಎನ್ನ
ಸೆಳೆದುಕೊಂಡೊಯ್ಯೊ ನೀನಂಬಿಗ ||  ||

ಆರು ತೆರೆಯ ನೋಡಂಬಿಗ ಅದು
ಮೀರಿ ಬರುತಲಿದೆ ಅಂಬಿಗ
ಯಾರಿಂದಲಾಗದು ಅಂಬಿಗ ಅದ ನಿ-
ವಾರಿಸಿ ದಾಟಿಸೊ ಅಂಬಿಗ ||  ||

ಹೊತ್ತು ಹೋಯಿತು ನೋಡಂಬಿಗ ಅಲ್ಲಿ
ಮತ್ತೈವರೀರ್ವರು ಅಂಬಿಗ
ಒತ್ತಿ ನಡೆಸು ನೋಡಿ ಅಂಬಿಗ ಎನ್ನ 
ಸತ್ಯಲೋಕಕೆ ಒಯ್ಯೊ ಅಂಬಿಗ ||  ||

ಸತ್ತ್ವಪಥದೊಳಗಂಬಿಗ ಪರಾ-
ಭಕ್ತಿ ಹುಟ್ಟನು ಹಾಕಿ ಅಂಬಿಗ
ಮುಕ್ತಿ ದಾಯಕ ನಮ್ಮ ಪುರಂದರ ವಿಠಲ
ಮುಕ್ತಿಮಂಟಪಕೊಯ್ಯೊ ಅಂಬಿಗ ||  ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

Saturday, July 29, 2017

ಅಂದಿಂದ ನಾ ನಿನ್ನ ನೆರೆ ನಂಬಿದೆನೊ ಕೃಷ್ಣ ( ರಾಗ - ಕಲ್ಯಾಣಿ, ತಾಳ - ತ್ರಿವಿಡೆ )

ಅಂದಿಂದ ನಾ ನಿನ್ನ ನೆರೆ ನಂಬಿದೆನೊ ಕೃಷ್ಣ ||  ||
ತಂದೆ ಗೋವಿಂದ ಮುಕುಂದನ ನಂದನ ಕಂದ || . ||

ಬಲವಂತನುತ್ತಾನಪಾದರಾಯನ ಕಂದ
ಬಲತಾಯಿ ನೂಕಲು ಅಡವಿಯೊಳು
ಜಲಜಾಕ್ಷ ನಿನ್ನ ಕುರಿತು ತಪವಿರಲಾಗಿ
ಒಲಿದು ಧ್ರುವಗೆ ಪಟ್ಟಗಟ್ಟಿದ್ದು ಕೇಳಿ ||  ||

ನಕ್ರಂಗೆ ಗಜರಾಜ ಸಿಕ್ಕು ಸರಸಿಯೊಳು
ದುಃಖದಿ ಶ್ರೀಹರಿಯೆ ಸಲಹೆನ್ನಲು
ಚಕ್ರದಿ ನೆಗಳ ಕಂಠವ ತರಿದು ಭಕ್ತನ
ವಕ್ರದಿ ಪರಿದಾದಿಮೂಲನೆಂಬುದ ಕೇಳಿ ||  ||

ದ್ರುಪದನ ಸುತೆಯ ದುಶ್ಯಾಸನ ಸಭೆಯೊಳು
ಕಪಟದಿ ಸೀರೆಯ ಸೆಳೆಯುತಿರೆ 
ಸುಪರ್ಣವಾಹನ ಕೃಷ್ಣ ಸಲಹೆಂದ ಅಬಲೆಯ
ಅಪಮಾನದಿಂ ಕಾಯ್ದ ಶ್ರೀಹರಿಯೆಂಬುದ ಕೇಳಿ ||  ||

ಹರಿನಾರಾಯಣನೆಂದು ನಾರದ ಒರೆಯಲು
ದುರುಳ ದಾನವನೊಳು ಮುನಿದು
ಕರೆ ನಿನ್ನ ಒಡೆಯನ ಎಂದು ಗರ್ಜಿಸೆ ನರ-
ಹರಿ ಬಂದು ಒಡನೆಯೆ ಕಾಯ್ದನೆಂಬುದ ಕೇಳಿ ||  ||

ಅಂಬರೀಷಗೆ ದೂರ್ವಾಸ ಶಾಪವ ಕೊಡೆ
ಅಂಬುಜಲೋಚನ ಚಕ್ರದಿಂದ 
ಬೆಂಬತ್ತಿ ಮುನಿಯ ಶಾಪವ ಪತಿಹರಿಸಿದ
ಕಂಬು ಚಕ್ರಧರ ಹರಿಯೆಂಬುದ ಕೇಳಿ ||  ||

ಛಲ ಬೇಡ ರಾಮನ ಲಲನೆಯ ಬಿಡುಯೆಂದು
ತಲೆ ಹತ್ತರವಗೆ ಪೇಳುಲು ತಮ್ಮನ 
ಬಳಲಿಸಿ ಹೊರಡಿಸುವ ನಿನ್ನ ಮೊರೆ ಹೊಗೆ
ಸಲೆ ವಿಭೀಷಣಗೆ ಲಂಕೆಯನ್ನಿತ್ತುದ ಕೇಳಿ ||  ||

ಸುರನರ ನಾಗಲೋಕದ ಭಕ್ತ ಜನರನ್ನು
ಪೊರೆಯಲೋಸುಗ ವೈಕುಂಠದಿಂದ
ಸಿರಿಸಹಿತಲೆ ಬಂದು ಶೇಷಾಚಲದಿ ನಿಂತ
ಪುರಂದರವಿಠಲ ನಿನ್ನಯ ಚರಣವ ಕಂಡು ||  ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿ

ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿ
ಮತಿ ಪ್ರೇರಿಸುವಳು ಪಾರ್ವತಿದೇವಿ ಮು-
ಕುತಿ ಪಥಕೆ ಮನವೀವ ಮಹರುದ್ರದೇವರು ಭ-
ಕುತಿದಾಯಕಳು ಸಿರಿ ಭಾರತಿದೇವಿ ಯು-
ಕುತಿ ಶಾಸ್ತ್ರಗಳಲ್ಲಿ ವನಜಸಂಭವನರಸಿ
ಸತ್ಕರ್ಮಗಳ ನಡೆಸಿ ಸುಜ್ಞಾನಮತಿಯಿತ್ತು ಮತಿ
ಪಾಲಿಸುವ ನಮ್ಮ ಪವಮಾನನು 
ಚಿತ್ತದಲಿ ಆನಂದ ಸುಖನೀವಳು ರಮಾ ಭ-
ಕುತ ಜನರೊಡೆಯ ನಮ್ಮ ಪುರಂದರವಿಠ್ಠಲನು
ಸತತ ಇವರಲಿ ನಿಂತು ಕೃತಿಯ ನಡೆಸುವನು

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

Tuesday, July 18, 2017

ಆಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ ( ರಾಗ - ಮುಖಾದಿ, ತಾಳ - ಝಂಪೆ )

ಆಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ 
ಚಿಂತೆಯನು ಬಿಟ್ಟು ಶ್ರೀಹರಿಯ ನೆನೆ ಮನವೆ ||  ||

ದಿವ ರಾತ್ರಿಯೆನ್ನದೆ ವಿಷಯಲಂಪಟನಾಗಿ
ಸವಿಯೂಟಗಳನುಂಡು ಭ್ರಮಿಸಬೇಡ
ಅವನ ಕೊಂದಿವನ ಕೊಂದರ್ಥವನು ಗಳಿಸುವೊಡೆ
ಜವನದೂತರು ಬರುವ ಹೊತ್ತು ನೀನರಿಯೆ ||  ||

ಮೊನ್ನೆ ಮದುವೆಯನಾದೆ ಕರೆವುದೊಂದೆರಡೆಮ್ಮೆ
ನಿನ್ನೆ ಕೊಂಡೆನು ಕ್ಷೇತ್ರ ಫಲವು ಬಹುದು
ಹೊನ್ನು ಹಣವುಂಟೆನಗೆ ಸಾಯಲಾರೆನು ಎನಲು
ಬೆನ್ನು ಬಿಡುವಳೆ ಮೃತ್ಯು ವ್ಯರ್ಥ ಜೀವಾತ್ಮಾ ||  ||

ಹೊಸ ಮನೆಯ ಕಟ್ಟಿದೆನು ಗೃಹಶಾಂತಿ ಮನೆಯೊಳಗೆ
ಬಸುರಿ ಹೆಂಡತಿ ಮಗನ ಮದುವೆ ನಾಳೆ
ಹಸನಾಗಿ ಇದೆ ಬದುಕು ಸಾಯಲಾರೆನು ಎನಲು
ಕುಸುರಿದರಿಯದೆ ಬಿಡರು ಯಮನವರು ಆಗ ||  ||

ಪುತ್ರ ಹಿಟ್ಟಿದ ದಿವಸ ಹಾಲು ಊಟದ ಹಬ್ಬ
ಮತ್ತೊಬ್ಬ ಮಗನ ಉಪನಯನ ನಾಳೆ
ಅರ್ತಿಯಾಗಿದೆ ಬದುಕು ಸಾಯಲಾರೆನು ಎನಲು
ಮೃತ್ಯು ಹೆಡತಲೆಯಲ್ಲಿ ನಗುತಿರ್ಪುದರಿಯೆ ||  ||

ಅಟ್ಟಡಿಗೆಯುಣಲಿಲ್ಲ ಇಷ್ಟ ದರುಶನವಿಲ್ಲ
ಕೊಟ್ಟ ಸಾಲವ ಕೇಳ್ವ ಹೊತ್ತನರಿಯೆ
ಕಟ್ಲೆ ತುಂಬಿದ ಮೇಲೆ ಕ್ಷಣಮಾತ್ರ ಇರಲಿಲ್ಲ
ಅಷ್ಟರೊಳು ಪುರಂದರವಿಠಲನೆನು ಮನವೆ ||  ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

ಅಂಜಿಕಿನ್ಯಾತಕಯ್ಯಾ ಸಜ್ಜನರಿಗೆ ( ರಾಗ - ಕಲ್ಯಾಣಿ, ತಾಳ - ಅಟ್ಟ )

ಅಂಜಿಕಿನ್ಯಾತಕಯ್ಯಾ ಸಜ್ಜನರಿಗೆ
ಭಯವು ಇನ್ಯಾತಕಯ್ಯಾ ||  ||

ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ || . ||

ಕನಸಿಲಿ ಮನಸಿಲಿ ಕಳವಳವಾದರೆ
ಹನುಮನ ನೆನೆದರೆ ಹಾರಿಹೋಗದೆ ಭೀತಿ ||  ||

ರೋಮ ರೋಮಕೆ ಕೋಟಿ ಲಿಂಗವುದುರಿಸಿದ
ಭೀಮನ ನೆನೆದರೆ ಬಿಟ್ಟು ಹೋಗದೆ ಭೀತಿ ||  ||

ಪುರಂದರವಿಠಲನ ಪೂಜೆಯ ಮಾಡುವ
ಗುರು ಮಧ್ವರಾಯರ ಸ್ಮರಣೆ ಮಾಡಿದ ಮೇಲೆ ||  ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ( ರಾಗ - ಕಾಂಬೋದಿ, ತಾಳ - ಆದಿ )

ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ ||  ||
ಮಂಗಳ ನಾಮವ ಪಾಡಿ ರಂಗನ ಕುಣಿಸುವರು || . ||

ಪಾಡಿ ಮಲಹರಿ ಭೈರವಿ ಸಾರಂಗಿ ದೇಶಿ
ಗುಂಡಕ್ರಿಯ ಗುರ್ಜರಿ ಕಲ್ಯಾಣಿ ರಾಗದಿ
ತಂಡ ತಂಡದಲಿ ನೆರೆದು ರಂಗನ ಉಡಿಯ ಘಂಟೆ
ಢಂಢಣಡಣಿರೆಂದು ಹಿಡಿದು ಕುಣಿಸುವರು ||  ||

ತಿತ್ತಿರಿ ಮೌಳಿ ತಾಳ ದಂಡಿಗೆ ಮದ್ದಲೆ
ಉತ್ತಮದ ಶಂಖ ಶಬ್ದ ನಾದಗಳಿಂದ
ಸುತ್ತ ಮುತ್ತಿ ನಾರಿಯರು ಥೈ ತಥೈ ಥಾಯೆಂದು
ಅರ್ತಿಯಿಂದ ಕುಣಿಸುವರು ಪರವಸ್ತುವ ಹಿಡಿದು ||  ||

ಕಾಮಿನಿಯರೆಲ್ಲ ನೆರೆದು ಕಂದನೊಡನಾಟವಾಡಿ
ಪ್ರೇಮದಿಂ ಬಿಗಿ ಬಿಗಿದಪ್ಪಿ ಮುದ್ದಾಡಿ
ಕಾಮಿತ ಫಲವೀವ ಭಕುತಜನರೊಡೆಯ
ಸ್ವಾಮಿ ಶ್ರೀ ಪುರಂದರವಿಠಲರಾಯನ್ನ ||  ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

Friday, July 14, 2017

ಆಡಿ ಆಡಿಸುವವನು - ಗೋಪಾಲದಾಸರ ಸುಳಾದಿ

ಧ್ರುವ ತಾಳ

ಆಡಿ ಆಡಿಸುವನು ನಾಡ ಜೀವರನ್ನು
ಮಾಡಿ ಮಾಡಿಸುವನು ನಾಡಜೀವರ ಕೈಲಿ
ಬೇಡಿ ಬೇಡಿಸುವನು ನಾಡ ಜೀವರ ಕೈಲಿ
ನೋಡಿ ನೋಡಿಸುವನು ನಾಡಜೀವರುಗಳ
ಓಡಿ ಓಡಿಸುವನು ನಾಡಜೀವರನ್ನು
ನೀಡಿ ನೀಡಿಸುವನು ನಾಡಜೀವರ ಕೈಗೆ
ಕೇಡು ಲಾಭವು ಎರಡು ಕೂಡಿ ಹರಿ ಅಧೀನ
ಮಾಡಿಸುವ ಯೋಗ್ಯತೆ ಹಿಡಿದು ಸಾಧನವ 
ರೂಢಿಯೊಳಗೆ ಇನ್ನು ಈಡಾದ ವಸ್ತುವಿಲ್ಲ 
ನಾಡಜೀವರಿಗೀತನಲ್ಲದೆ ಗತಿಯಿಲ್ಲ
ಪೀಡೆ ಮನವೆ ನಿನ್ನ ನಾಡ ಯೋಚನೆ ಹೋಗ
ಲಾಡಿ ಹರಿ ಪಾದ ನೋಡಿ ಸುಖಿಯಾಗಿರು
ನಾಡದೈವರಗಂಡ ಗೋಪಾಲವಿಠ್ಠಲನ್ನ
ಹಾಡಿ ಪಾಡಿ ಕೊಂಡಾಡಿ ಬೇಡಿಕೊ ಪದ್ಧತಿಯ


ಮಠ್ಯ ತಾಳ

ನನ್ನದೆಂಬುದರೊಳು ನಿನ್ನದೆ ಹರಿಯೆನ್ನು
ಉಣ್ಣೊ ಊಟವು ಎಲ್ಲ ನಿನ್ನದೆ ಹರಿಯೆನ್ನು
ಚಿನ್ನ ರೌಪ್ಯಗಳು ಬಣ್ಣ ಬಳಿದು ಎಲ್ಲ
ಕಣ್ಣಲಿ ಕಂಡದ್ದು ನಿನ್ನದೆ ಹರಿ ಅನ್ನು
ಪುಣ್ಯ ಪಾಪಗಳು ನಿನಗೆ ಮಾಡಲಿಕ್ಕೆ
ಇನ್ನು ಸ್ವಾತಂತ್ರ್ಯವು ಎಂದೆಂದಿಗೆ ಇಲ್ಲ
ಕಣ್ಣು ಇಲ್ಲದವಗೆ ಅನ್ನ ಉಣಿಸಿದಂತೆ
ಪುಣ್ಯಾತ್ಮದೇವ ಎನ್ನ ಪಾಲಿಸುವನು
ನಿನ್ನ ಕರ್ತೃತ್ವವು ಹರಿ ಅಧೀನವು
ಮನ್ನಿಸುವನು ತನ್ನ ಮಾನಬಂದಂತಾಡಿ
ಅನ್ಯ ದೈವರ ಗಂಡ ಗೋಪಾಲವಿಠಲ
ಅನಂತ ಶಕ್ತನು ಅನಂತ ಗುಣಪೂರ್ಣ

ರೂಪಕ ತಾಳ

ಊರ ಒಳಗಿನ ವಸ್ತು ಆರಾದರು ಒಯ್ದರೆ
ದೂರ ಹಾಕಿ ತಳವಾರರ ಹೊಡೆದಂತೆ
ಕ್ರೂರ ವಚನ ನಿಷ್ಠುರ ಜಿಹ್ವೆ ನುಡಿದರೆ
ಸೇರದೆ ಪರರ ಪಲ್ಲುದುರ ಬಡಿದಂತೆ
ಆರು ಮೆಚ್ಚದ ತಪ್ಪು ಕರಗಳು ಮಾಡಿದರೆ
ಹುರಿ ಬೆನ್ನ ಚರ್ಮ ಹಾರಹೊಡೆದಂತೆ
ಆರಾರಲ್ಲಿ ಕರ್ತ ಕರಯತಾ ಪ್ರೇರಕ
ಮಾರಜನಕನೆ ವ್ಯಾಪಾರ ಮಾಡಿಸಿ ಜೀವ
ನರಿಗಿಪ್ರಕಾರ ಕರ್ಮಫಲವುಣಿಸುವ
ಆರು ಈತಗೆ ಒಂದು ಸರಿಯಾದ ವಸ್ತುವಿಲ್ಲ 
ವಾರಿಜನಾಭನೆ ಸರ್ವೊತ್ತಮ ಕಾಣಿರೊ
ಶ್ರೀ ರಮಣ ನಮ್ಮ ಗೋಪಾಲವಿಠಲ
ಧೀರರಿಗೆ ಧೀರ ಕಾರುಣ್ಯಸಾಗರ

ಝಂಪೆ ತಾಳ

ದೇವನೆಂದರೆ ನಮ್ಮ ದೇವ ಈತನೆ ಕಾಣೊ
ದೇವಾದಿ ದೇವತೆಗಳಿಗೆ ದೇವದೇವರೆಂಬೊ ಮಿಕ್ಕ
ದೇವತೆಗಳಿಗೆಲ್ಲ ದೇವ ಈತನೆ ಕಾವುತಾನೆ ನೊಡಿ
ದೇವನಿಲ್ಲದ ಸ್ಥಳವು ಆವಲ್ಲಿ ಇಲ್ಲವಿನ್ನು 
ದೇವ ಸರ್ವತ್ರದಲಿ ವ್ಯಾಪಕ ಭಾವ ಶುದ್ಧದಲಿನ್ನು
ಸೇವಿಸಿದರಿನ್ನು ದೇವ ದೇವಕ್ಕಿಗೆ ಕಂದನಾದ
ಗೋವಳರೊಡೆಯ ನಮ್ಮ ಗೋಪಾಲವಿಠ್ಠಲನ
ಕಾವೊಘನವಯ್ಯ ಇನ್ನಾವಲ್ಲಿದ್ದರನ್ನು

ತ್ರಿಪುಟ ತಾಳ

ಲೋಕಾಲೋಕದೊಳು ಅನೇಕ ಜೀವರುಂಟು
ಲೋಕಾಲೋಕಾಚಾರ ಅನೇಕ ಕರ್ಮಗಳುಂಟು
ಲೋಕ ಲೋಕದೊಳಗೆ ತ್ರವಿಧ ಜೀವರುಂಟು
ಲೋಕ ಲೋಕಕೆ ಎಲ್ಲ ಸಾಕುವನೊಬ್ಬನೆ
ಕಾಕುಗೊಂಡಿನ್ನು ಕಂಡವರಿಗೆ ಬೇಡಿದರೆ
ತಾ ಕೊಡುವರೆಲ್ಲಿಂದ ತಾ ಕಾಣದವರೆಲ್ಲ
ಸಾಕುವನೊಬ್ಬನೆ ಸಕಲ ಜೀವರುಗಳ
ನೀ ಕೇಳು ಮನವೆ ನಿನ್ವ್ಯಾಕುಲವನು ಬಿಡು
ಏಕ ಚಿತ್ತದಲಿನ್ನು ಏಕೋದೇವನ ಭಜಿಸು
ಸಾಕಲ್ಯ ಗುಣಪೂರ್ಣ ಗೋಪಾಲವಿಠಲ
ಲೋಕದಿಂದಲಿ ಭಿನ್ನ ಲೋಕರ ಪಾಲಕ

ಅಟ್ಟ ತಾಳ

ತ್ರಿವಿಧ ಜೀವರು ಉಂಟು ತ್ರಿವಿಧ ಕರ್ಮಗಳುಂಟು
ತ್ರಿವಿಧಗುಣಗಳುಂಟು ತ್ರಿವಿಧಕಾರ್ಯಗಳುಂಟು
ತ್ರಿವಿಧರೊಳೊಂದೊಂದು ತ್ರಿವಿಧ ಬಗೆಯೆ ಉಂಟು
ತ್ರಿವಿಧ ಜೀವರ ಕಾರ್ಯ ಶ್ರೀಹರಿ ಅಧೀನ
ತ್ರಿವಿಧರಿಂದಲಿ ಭಿನ್ನ ತ್ರಿವಿಧರ ಪಾಲಕ
ತ್ರಿಕ್ರಮ ಮೂರ್ತಿ ಗೋಪಾಲವಿಠಲನ್ನ
ತಿಳಿದು ಸಾಕಲ್ಯದಿ ತಿಳಿಯಲು ವಶವಲ್ಲ

ಆದಿ ತಾಳ

ಈತನೆ ನಮ್ಮ ದೇವ ಈತನೆ ನಮ್ಮ ಕಾವ
ಈತನೆ ನಮ್ಮ ತಂದೆ ಈತನೆ ನಮ್ಮ ತಾಯಿ
ಈತನೆ ನಮ್ಮ ಬಂಧು ಈತನೆ ನಮ್ಮ ಬಳಗ
ಈತನೆ ಇಹ ನಮಗೀತನೆ ಪರವೊ
ಈತನೆ ದೇಶವು ಈತನೆ ದಿಕ್ಕಿನ್ನು
ಈತನೆ ಗತಿ ಇನ್ನೊಂದು ದೈವವಿಲ್ಲ
ವಾತಜಾತನಪಿತ ಗೋಪಾಲವಿಠಲ
ಸೋತೆನೆಂದವರ ಬೆನ್ಹತ್ತಿ ಪಾಲಿಸುವನು

ಜತೆ

ಬಿಡೆನು ಬಿಡೆನು ಇನ್ನು ಮುಂದೆ ಇದೆ ದೈವ
ಪಿಡಿದೆ ಗೋಪಾಲವಿಠಲನ ಅಡಿಗಳ ಅನುದಿನ

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

Tuesday, July 11, 2017

ಆನೆಯ ನೋಡಿರಯ್ಯ ( ರಾಗ - ಕಲ್ಯಾಣಿ, ತಾಳ - ಅಟ )

ಆನೆಯ ನೋಡಿರಯ್ಯ ನೀವೆಲ್ಲರು ||  ||
ಆನಂದ ಪಡೆಯಿರಯ್ಯ
ತಾನು ತನ್ನವರೆಂಬ ಮಾನವರ ಸಲಹಿದ || . ||

ಪಾಂಡುಚಕ್ರೇಶನ ಸುತಗೆ ಒಲಿದಾನೆ
ಗಂಡುಗಲಿ ಮಾಗಧನ ಒರಸದಾನೆ
ಹಿಂಡುಗೋವಳರೊಳು ಹಿರಿಯನ ಕಳೆಯದಾನೆ
ಲಂಡರಿಗೆ ಎದೆಗೊಡುವ ಪುಂಡ ಆನೆ ||  ||

ಬಾಲಕನ ನುಡಿ ಕೇಳಿ ಖಳನ ಸೀಳಿದಾನೆ
ಪಾಲುಂಡು ವಿದುರನ ಸಲಹಿದಾನೆ
ಲೋಲಾಕ್ಷಿಯ ಮಾನಭಂಗಕ್ಕೊದಗಿದಾನೆ 
ಖೂಳ ಶಿಶುಪಾಲನ ಸೀಳಿದಾನೆ ||  ||

ಅಜಮಿಳಗೆ ನಿಜ ಪದವಿಯ ಕೊಟ್ಟಾನೆ
ಕುಜನರೆಲ್ಲರನು ವರ್ಜಿಸಿದಾನೆ
ಅಜಪಿತ ಕಾಗಿನೆಲೆಯಾದಿಕೇಶವನೆ 
ತ್ರಿಜಗವಲ್ಲಭ ತಾನು ಭಜಕರ ವಶವಾನೆ ||  ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು