ಅಂಬಿಗ ನಾ ನಿನ್ನ ನಂಬಿದೆ ಜಗ-
ದಂಬಾರಮಣ ನಿನ್ನ ನಂಬಿದೆ
|| ಪ||
ತುಂಬಿದ ಹರಿಗೋಲಂಬಿಗ ಅದ-
ಕೊಂಬತ್ತು ಛಿದ್ರ ನೋಡಂಬಿಗ
ಸಂಭ್ರಮದಿಂದ ನೀನಂಬಿಗ ಅದ-
ರಿಂಬು ನೋಡಿ ನಡೆಸಂಬಿಗ
|| ೧ ||
ಹೊಳೆಯ ಅಬ್ಬರ ನೋಡಂಬಿಗ ಅದಕೆ
ಸೆಳೆವು ಘನವಯ್ಯ ಅಂಬಿಗ
ಸುಳಿಯೊಳು ಮುಳುಗಿದೆ ಅಂಬಿಗ ಎನ್ನ
ಸೆಳೆದುಕೊಂಡೊಯ್ಯೊ ನೀನಂಬಿಗ
|| ೨ ||
ಆರು ತೆರೆಯ ನೋಡಂಬಿಗ ಅದು
ಮೀರಿ ಬರುತಲಿದೆ ಅಂಬಿಗ
ಯಾರಿಂದಲಾಗದು ಅಂಬಿಗ ಅದ ನಿ-
ವಾರಿಸಿ ದಾಟಿಸೊ ಅಂಬಿಗ
|| ೩ ||
ಹೊತ್ತು ಹೋಯಿತು ನೋಡಂಬಿಗ ಅಲ್ಲಿ
ಮತ್ತೈವರೀರ್ವರು ಅಂಬಿಗ
ಒತ್ತಿ ನಡೆಸು ನೋಡಿ ಅಂಬಿಗ ಎನ್ನ
ಸತ್ಯಲೋಕಕೆ ಒಯ್ಯೊ ಅಂಬಿಗ
|| ೪ ||
ಸತ್ತ್ವಪಥದೊಳಗಂಬಿಗ ಪರಾ-
ಭಕ್ತಿ ಹುಟ್ಟನು ಹಾಕಿ ಅಂಬಿಗ
ಮುಕ್ತಿ ದಾಯಕ ನಮ್ಮ ಪುರಂದರ ವಿಠಲ
ಮುಕ್ತಿಮಂಟಪಕೊಯ್ಯೊ ಅಂಬಿಗ
|| ೫ ||
ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು
No comments:
Post a Comment