Monday, July 3, 2017

ಅರಿತು ಭಜಿಪರಾರಯ್ಯ ರಂಗಯ್ಯ ನಿನ್ನ (ರಾಗ - ಮೋಹನ, ತಾಳ - ಅಟ)

ಅರಿತು ಭಜಿಪರಾರಯ್ಯ ರಂಗಯ್ಯ ನಿನ್ನ ||  ||

ಸಿರಿದೇವಿಯು ಕಿರುಬೆರಳಲ್ಲಿರುವ ಸೊಬಗನ್ನು 
ಅರಿಯಲಾರಳೊ ದೇವ || . ||

ಇಂದಿರಾ ದೇವಿಯು ಅರಿಯಲಾರಳು ದೇವ
ಬೃಂದಾರಕರೆಲ್ಲ ನಿಂದು ಯೋಚಿಪರು
ನಂದತೀರ್ಥರ ಮತದೊಳಗೆ ಬಂದವರೆಲ್ಲ
ಎಂದಿಗಾದರೂ ಪರಮಾನಂದ ಪೊಂದುವರು ||  ||

ಮಾನವರು ಹೀನ ಮಾರ್ಗದೊಳು ಮುಳುಗಿಹರು
ಜ್ಞಾನಿಗಳು ನಿಂದು ಧ್ಯಾನಿಪರು ನಿನ್ನ
ನೀನೆ ದಯಮಾಡಿ ಸಲಹೊ ಎನ್ನನು ಕೃಷ್ಣ
ಕಾನನದೊಳು ಕಣ್ಣು ಮುಚ್ಚಿ ಬಿಟ್ಟಿಹರೊ ||  ||

ಜಲದೊಳಗಿನ ಕಪ್ಪೆ ಜಲದ ಸವಿಯರಿಯದು
ಜಲದ ಸುಗಂಧವ ಜಲವರಿಯದು
ನೆಲೆಯ ಕಂಡವರ್ಯಾರು ನೆಲೆಯಾದಿಕೇಶವನೆ
ಸುಲಲಿತ ತತ್ವವನು ಸುಲಭ ಮಾರ್ಗದಿ ತೋರೊ ||  ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

No comments:

Post a Comment