ಆನೆಯ ನೋಡಿರಯ್ಯ ನೀವೆಲ್ಲರು
|| ಪ ||
ಆನಂದ ಪಡೆಯಿರಯ್ಯ
ತಾನು ತನ್ನವರೆಂಬ ಮಾನವರ ಸಲಹಿದ || ಅ.ಪ ||
ಪಾಂಡುಚಕ್ರೇಶನ ಸುತಗೆ ಒಲಿದಾನೆ
ಗಂಡುಗಲಿ ಮಾಗಧನ ಒರಸದಾನೆ
ಹಿಂಡುಗೋವಳರೊಳು ಹಿರಿಯನ ಕಳೆಯದಾನೆ
ಲಂಡರಿಗೆ ಎದೆಗೊಡುವ ಪುಂಡ ಆನೆ || ೧ ||
ಬಾಲಕನ ನುಡಿ ಕೇಳಿ ಖಳನ ಸೀಳಿದಾನೆ
ಪಾಲುಂಡು ವಿದುರನ ಸಲಹಿದಾನೆ
ಲೋಲಾಕ್ಷಿಯ ಮಾನಭಂಗಕ್ಕೊದಗಿದಾನೆ
ಖೂಳ ಶಿಶುಪಾಲನ ಸೀಳಿದಾನೆ
|| ೨ ||
ಅಜಮಿಳಗೆ ನಿಜ ಪದವಿಯ ಕೊಟ್ಟಾನೆ
ಕುಜನರೆಲ್ಲರನು ವರ್ಜಿಸಿದಾನೆ
ಅಜಪಿತ ಕಾಗಿನೆಲೆಯಾದಿಕೇಶವನೆ
ತ್ರಿಜಗವಲ್ಲಭ ತಾನು ಭಜಕರ ವಶವಾನೆ
|| ೩ ||
ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು
No comments:
Post a Comment