ಅಹಹ ಮೋಸ ಹೋದೆನಯ್ಯ ಹರಿಯೆ ನಿನ್ನ ನೆನೆಯದೆ
|| ಪ ||
ಇಹದ ಭೋಗ ನಿತ್ಯವೆಂದು ಮೆರೆದೆ ನಿನ್ನ ನೆನೆಯದೆ
|| ಅ.ಪ ||
ಹೇಯವಾದ ದೇಹವನ್ನು ಶ್ಲಾಘನೀಯವೆಂದು ನಾಲ್ವರೊಡನೆ
ಪಾಯದಿಂದ ಹೇಮದಂತೆ ಬಣ್ಣಗಟ್ಟಿ
ಬಾಯ ಬಡಿದು ತಂದು ತಂದು
ಕಾಲ ಕಳೆದೆನಲ್ಲದೆ
|| ೧ ||
ಚಂಚಲತ್ವ ಬಲವು ಫಲವು ಜಾಲ ಕೋಪ ತಾಪದಿಂದ
ವಂಚನಾರ್ಥ ಹಲವು ಕೆಲವು ಮಿಂಚಿನಂತೆ ಸುಳಿಸುತ
ಸಂಚುಮಾಡಿ ಕಾಲನವರ ವಂಚನೆಗಳ ತಿಳಿಯದ್ಹೋದೆ
ಪಂಚಬಾಣನಯ್ಯ ಕಾಯೊ ಎನ್ನವಗುಣಗಳೆಣಿಸದೆ
|| ೨ ||
ದಿಕ್ಕುದೆಸೆಯದಾರೊ ಅಕ್ಕರದಿಂದಾರ ಕರೆವೆ
ಉಕ್ಕಿ ಸವಿದು ಮನುಜರೊಡನೆ
ಸೊಕ್ಕಿ ದಿನವ ಕಳೆದೆನೆನಗೆ
ತಕ್ಕುದಾಯಿತಯ್ಯ ಕೇಳು ಒಡೆಯ ಆದಿಕೇಶವ
|| ೩ ||
ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು
No comments:
Post a Comment