ಆಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ
ಚಿಂತೆಯನು ಬಿಟ್ಟು ಶ್ರೀಹರಿಯ ನೆನೆ ಮನವೆ
|| ಪ ||
ದಿವ ರಾತ್ರಿಯೆನ್ನದೆ ವಿಷಯಲಂಪಟನಾಗಿ
ಸವಿಯೂಟಗಳನುಂಡು ಭ್ರಮಿಸಬೇಡ
ಅವನ ಕೊಂದಿವನ ಕೊಂದರ್ಥವನು ಗಳಿಸುವೊಡೆ
ಜವನದೂತರು ಬರುವ ಹೊತ್ತು ನೀನರಿಯೆ
|| ೧ ||
ಮೊನ್ನೆ ಮದುವೆಯನಾದೆ ಕರೆವುದೊಂದೆರಡೆಮ್ಮೆ
ನಿನ್ನೆ ಕೊಂಡೆನು ಕ್ಷೇತ್ರ ಫಲವು ಬಹುದು
ಹೊನ್ನು ಹಣವುಂಟೆನಗೆ ಸಾಯಲಾರೆನು ಎನಲು
ಬೆನ್ನು ಬಿಡುವಳೆ ಮೃತ್ಯು ವ್ಯರ್ಥ ಜೀವಾತ್ಮಾ
|| ೨ ||
ಹೊಸ ಮನೆಯ ಕಟ್ಟಿದೆನು ಗೃಹಶಾಂತಿ ಮನೆಯೊಳಗೆ
ಬಸುರಿ ಹೆಂಡತಿ ಮಗನ ಮದುವೆ ನಾಳೆ
ಹಸನಾಗಿ ಇದೆ ಬದುಕು ಸಾಯಲಾರೆನು ಎನಲು
ಕುಸುರಿದರಿಯದೆ ಬಿಡರು ಯಮನವರು ಆಗ || ೩ ||
ಪುತ್ರ ಹಿಟ್ಟಿದ ದಿವಸ ಹಾಲು ಊಟದ ಹಬ್ಬ
ಮತ್ತೊಬ್ಬ ಮಗನ ಉಪನಯನ ನಾಳೆ
ಅರ್ತಿಯಾಗಿದೆ ಬದುಕು ಸಾಯಲಾರೆನು ಎನಲು
ಮೃತ್ಯು ಹೆಡತಲೆಯಲ್ಲಿ ನಗುತಿರ್ಪುದರಿಯೆ
|| ೪ ||
ಅಟ್ಟಡಿಗೆಯುಣಲಿಲ್ಲ ಇಷ್ಟ ದರುಶನವಿಲ್ಲ
ಕೊಟ್ಟ ಸಾಲವ ಕೇಳ್ವ ಹೊತ್ತನರಿಯೆ
ಕಟ್ಲೆ ತುಂಬಿದ ಮೇಲೆ ಕ್ಷಣಮಾತ್ರ ಇರಲಿಲ್ಲ
ಅಷ್ಟರೊಳು ಪುರಂದರವಿಠಲನೆನು ಮನವೆ
|| ೫ ||
ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು
No comments:
Post a Comment