Tuesday, July 11, 2017

ಅಹುದಾದಡಹುದೆನ್ನಿ ( ರಾಗ - ಸಾವೇರಿ, ತಾಳ - ಮಟ್ಟ )

ಅಹುದಾದಡಹುದೆನ್ನಿ ಅಲ್ಲವಾದಡಲ್ಲವೆನ್ನಿ
ಸಹಜವಿದು ಸಜ್ಜನರ ಮನಕೆ ಸಮ್ಮತವು ||  ||

ಕರಿಕೆಯಿಲ್ಲದ ಬಾಳು ಕರಿವರದನ ದಯೆ ಕೇಳು
ಅರಿತವರಿರೆ ಮನೆಯೊಳು ಅದು ಸ್ವರ್ಗವು ಕೇಳು
ಕರಣಿಕರೊಳಗಣ ನಂಟು ಕಟ್ಟಿದ ಹಣವಿನ ಗಂಟು
ಗುರುವಿನ ವಾಕ್ಯದ ಭಕ್ತಿ ಇಹ-ಪರಕದು ಮುಕ್ತಿ ||  ||

ಒಕ್ಕಲಿಗಾಗದ ಗವುಡ ರೊಕ್ಕವ ಪಡೆವಾ ಕೊರಗ
ಮಕ್ಕಳ ಪಡೆವುದು ಪುಣ್ಯ ಅದು ಕೇಳಿರಿಯಣ್ಣ
ಇಕ್ಕುವ ಅನ್ನವು ಧರ್ಮ ಇಹ-ಪರಕದು ಅತಿ ಧರ್ಮ
ಬಿಕ್ಕಳಿಕಿಕ್ಕಿದ ವ್ಯಾಧಿ ಯಮಪುರಕದು ಹಾದಿ ||  ||

ಕಂಡರೆ ಸೇರದ ನಾರಿ ಕೆಂಡವನುಗುಳುವ ಮಾರಿ
ದಂಡವ ತೆರಿಸುವ ಪುತ್ರ ಹಗೆಹಳಿಗವ ಮಿತ್ರ
ಉಂಡರೆ ಸೇರದ ತಾಯಿ ಉರಗನ ಮಕ್ಕೆಯಕಾಯಿ
ಹಿಂಡನು ಅಗಲಿದ ಗೋವು ಹುಲಿಗಿಕ್ಕಿದ ಮೇವು ||  ||

ಪರನಾರಿಯರೊಡನಾಟ ಗರಳವನಟ್ಟುಂಬಾಟ
ಬರೆದೂ ಅರಿಯದ ಲೆಕ್ಕ ಕಡೆಯಲಿ ಬಹು ದುಃಖ
ಇರಿತಕೆ ಬೆದರುವ ಮದಕರಿ ಮರಿಯೆಂಬ ಕೋಡಗಮರಿ
ಕರೆಬರಲರಿಯದ ಗಂಡ ಅವ ನಾಚಿಕೆ ಭಂಡ ||  ||

ಸಮಯಕ್ಕೊದಗದ ಅರ್ಥ ಸಾವಿರವಿದ್ದರು ವ್ಯರ್ಥ
ಸವತಿಯರೊಳಗಣ ಕೂಟ ಎಳನಾಗರ ಕಾಟ
ಅಮರರಿಗೊದಗದ ಯಾಗ ಆಡಿನ ಮೇಲಣ ರೋಗ
ಆದಿಕೇಶವಭಕ್ತ ಅವ ಜೀವ್ನಮುಕ್ತ ||  ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

No comments:

Post a Comment