Saturday, July 29, 2017

ಅಂದಿಂದ ನಾ ನಿನ್ನ ನೆರೆ ನಂಬಿದೆನೊ ಕೃಷ್ಣ ( ರಾಗ - ಕಲ್ಯಾಣಿ, ತಾಳ - ತ್ರಿವಿಡೆ )

ಅಂದಿಂದ ನಾ ನಿನ್ನ ನೆರೆ ನಂಬಿದೆನೊ ಕೃಷ್ಣ ||  ||
ತಂದೆ ಗೋವಿಂದ ಮುಕುಂದನ ನಂದನ ಕಂದ || . ||

ಬಲವಂತನುತ್ತಾನಪಾದರಾಯನ ಕಂದ
ಬಲತಾಯಿ ನೂಕಲು ಅಡವಿಯೊಳು
ಜಲಜಾಕ್ಷ ನಿನ್ನ ಕುರಿತು ತಪವಿರಲಾಗಿ
ಒಲಿದು ಧ್ರುವಗೆ ಪಟ್ಟಗಟ್ಟಿದ್ದು ಕೇಳಿ ||  ||

ನಕ್ರಂಗೆ ಗಜರಾಜ ಸಿಕ್ಕು ಸರಸಿಯೊಳು
ದುಃಖದಿ ಶ್ರೀಹರಿಯೆ ಸಲಹೆನ್ನಲು
ಚಕ್ರದಿ ನೆಗಳ ಕಂಠವ ತರಿದು ಭಕ್ತನ
ವಕ್ರದಿ ಪರಿದಾದಿಮೂಲನೆಂಬುದ ಕೇಳಿ ||  ||

ದ್ರುಪದನ ಸುತೆಯ ದುಶ್ಯಾಸನ ಸಭೆಯೊಳು
ಕಪಟದಿ ಸೀರೆಯ ಸೆಳೆಯುತಿರೆ 
ಸುಪರ್ಣವಾಹನ ಕೃಷ್ಣ ಸಲಹೆಂದ ಅಬಲೆಯ
ಅಪಮಾನದಿಂ ಕಾಯ್ದ ಶ್ರೀಹರಿಯೆಂಬುದ ಕೇಳಿ ||  ||

ಹರಿನಾರಾಯಣನೆಂದು ನಾರದ ಒರೆಯಲು
ದುರುಳ ದಾನವನೊಳು ಮುನಿದು
ಕರೆ ನಿನ್ನ ಒಡೆಯನ ಎಂದು ಗರ್ಜಿಸೆ ನರ-
ಹರಿ ಬಂದು ಒಡನೆಯೆ ಕಾಯ್ದನೆಂಬುದ ಕೇಳಿ ||  ||

ಅಂಬರೀಷಗೆ ದೂರ್ವಾಸ ಶಾಪವ ಕೊಡೆ
ಅಂಬುಜಲೋಚನ ಚಕ್ರದಿಂದ 
ಬೆಂಬತ್ತಿ ಮುನಿಯ ಶಾಪವ ಪತಿಹರಿಸಿದ
ಕಂಬು ಚಕ್ರಧರ ಹರಿಯೆಂಬುದ ಕೇಳಿ ||  ||

ಛಲ ಬೇಡ ರಾಮನ ಲಲನೆಯ ಬಿಡುಯೆಂದು
ತಲೆ ಹತ್ತರವಗೆ ಪೇಳುಲು ತಮ್ಮನ 
ಬಳಲಿಸಿ ಹೊರಡಿಸುವ ನಿನ್ನ ಮೊರೆ ಹೊಗೆ
ಸಲೆ ವಿಭೀಷಣಗೆ ಲಂಕೆಯನ್ನಿತ್ತುದ ಕೇಳಿ ||  ||

ಸುರನರ ನಾಗಲೋಕದ ಭಕ್ತ ಜನರನ್ನು
ಪೊರೆಯಲೋಸುಗ ವೈಕುಂಠದಿಂದ
ಸಿರಿಸಹಿತಲೆ ಬಂದು ಶೇಷಾಚಲದಿ ನಿಂತ
ಪುರಂದರವಿಠಲ ನಿನ್ನಯ ಚರಣವ ಕಂಡು ||  ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

No comments:

Post a Comment