ಧ್ರುವ ತಾಳ
ಆಡಿ ಆಡಿಸುವನು ನಾಡ ಜೀವರನ್ನು
ಮಾಡಿ ಮಾಡಿಸುವನು ನಾಡಜೀವರ ಕೈಲಿ
ಬೇಡಿ ಬೇಡಿಸುವನು ನಾಡ ಜೀವರ ಕೈಲಿ
ನೋಡಿ ನೋಡಿಸುವನು ನಾಡಜೀವರುಗಳ
ಓಡಿ ಓಡಿಸುವನು ನಾಡಜೀವರನ್ನು
ನೀಡಿ ನೀಡಿಸುವನು ನಾಡಜೀವರ ಕೈಗೆ
ಕೇಡು ಲಾಭವು ಎರಡು ಕೂಡಿ ಹರಿ ಅಧೀನ
ಮಾಡಿಸುವ ಯೋಗ್ಯತೆ ಹಿಡಿದು ಸಾಧನವ
ರೂಢಿಯೊಳಗೆ ಇನ್ನು ಈಡಾದ ವಸ್ತುವಿಲ್ಲ
ನಾಡಜೀವರಿಗೀತನಲ್ಲದೆ ಗತಿಯಿಲ್ಲ
ಪೀಡೆ ಮನವೆ ನಿನ್ನ ನಾಡ ಯೋಚನೆ ಹೋಗ
ಲಾಡಿ ಹರಿ ಪಾದ ನೋಡಿ ಸುಖಿಯಾಗಿರು
ನಾಡದೈವರಗಂಡ ಗೋಪಾಲವಿಠ್ಠಲನ್ನ
ಹಾಡಿ ಪಾಡಿ ಕೊಂಡಾಡಿ ಬೇಡಿಕೊ ಪದ್ಧತಿಯ
ಮಠ್ಯ ತಾಳ
ನನ್ನದೆಂಬುದರೊಳು ನಿನ್ನದೆ ಹರಿಯೆನ್ನು
ಉಣ್ಣೊ ಊಟವು ಎಲ್ಲ ನಿನ್ನದೆ ಹರಿಯೆನ್ನು
ಚಿನ್ನ ರೌಪ್ಯಗಳು ಬಣ್ಣ ಬಳಿದು ಎಲ್ಲ
ಕಣ್ಣಲಿ ಕಂಡದ್ದು ನಿನ್ನದೆ ಹರಿ ಅನ್ನು
ಪುಣ್ಯ ಪಾಪಗಳು ನಿನಗೆ ಮಾಡಲಿಕ್ಕೆ
ಇನ್ನು ಸ್ವಾತಂತ್ರ್ಯವು ಎಂದೆಂದಿಗೆ ಇಲ್ಲ
ಕಣ್ಣು ಇಲ್ಲದವಗೆ ಅನ್ನ ಉಣಿಸಿದಂತೆ
ಪುಣ್ಯಾತ್ಮದೇವ ಎನ್ನ ಪಾಲಿಸುವನು
ನಿನ್ನ ಕರ್ತೃತ್ವವು ಹರಿ ಅಧೀನವು
ಮನ್ನಿಸುವನು ತನ್ನ ಮಾನಬಂದಂತಾಡಿ
ಅನ್ಯ ದೈವರ ಗಂಡ ಗೋಪಾಲವಿಠಲ
ಅನಂತ ಶಕ್ತನು ಅನಂತ ಗುಣಪೂರ್ಣ
ರೂಪಕ ತಾಳ
ಊರ ಒಳಗಿನ ವಸ್ತು ಆರಾದರು ಒಯ್ದರೆ
ದೂರ ಹಾಕಿ ತಳವಾರರ ಹೊಡೆದಂತೆ
ಕ್ರೂರ ವಚನ ನಿಷ್ಠುರ ಜಿಹ್ವೆ ನುಡಿದರೆ
ಸೇರದೆ ಪರರ ಪಲ್ಲುದುರ ಬಡಿದಂತೆ
ಆರು ಮೆಚ್ಚದ ತಪ್ಪು ಕರಗಳು ಮಾಡಿದರೆ
ಹುರಿ ಬೆನ್ನ ಚರ್ಮ ಹಾರಹೊಡೆದಂತೆ
ಆರಾರಲ್ಲಿ ಕರ್ತ ಕರಯತಾ ಪ್ರೇರಕ
ಮಾರಜನಕನೆ ವ್ಯಾಪಾರ ಮಾಡಿಸಿ ಜೀವ
ನರಿಗಿಪ್ರಕಾರ ಕರ್ಮಫಲವುಣಿಸುವ
ಆರು ಈತಗೆ ಒಂದು ಸರಿಯಾದ ವಸ್ತುವಿಲ್ಲ
ವಾರಿಜನಾಭನೆ ಸರ್ವೊತ್ತಮ ಕಾಣಿರೊ
ಶ್ರೀ ರಮಣ ನಮ್ಮ ಗೋಪಾಲವಿಠಲ
ಧೀರರಿಗೆ ಧೀರ ಕಾರುಣ್ಯಸಾಗರ
ಝಂಪೆ ತಾಳ
ದೇವನೆಂದರೆ ನಮ್ಮ ದೇವ ಈತನೆ ಕಾಣೊ
ದೇವಾದಿ ದೇವತೆಗಳಿಗೆ ದೇವದೇವರೆಂಬೊ ಮಿಕ್ಕ
ದೇವತೆಗಳಿಗೆಲ್ಲ ದೇವ ಈತನೆ ಕಾವುತಾನೆ ನೊಡಿ
ದೇವನಿಲ್ಲದ ಸ್ಥಳವು ಆವಲ್ಲಿ ಇಲ್ಲವಿನ್ನು
ದೇವ ಸರ್ವತ್ರದಲಿ ವ್ಯಾಪಕ ಭಾವ ಶುದ್ಧದಲಿನ್ನು
ಸೇವಿಸಿದರಿನ್ನು ದೇವ ದೇವಕ್ಕಿಗೆ ಕಂದನಾದ
ಗೋವಳರೊಡೆಯ ನಮ್ಮ ಗೋಪಾಲವಿಠ್ಠಲನ
ಕಾವೊಘನವಯ್ಯ ಇನ್ನಾವಲ್ಲಿದ್ದರನ್ನು
ತ್ರಿಪುಟ ತಾಳ
ಲೋಕಾಲೋಕದೊಳು ಅನೇಕ ಜೀವರುಂಟು
ಲೋಕಾಲೋಕಾಚಾರ ಅನೇಕ ಕರ್ಮಗಳುಂಟು
ಲೋಕ ಲೋಕದೊಳಗೆ ತ್ರವಿಧ ಜೀವರುಂಟು
ಲೋಕ ಲೋಕಕೆ ಎಲ್ಲ ಸಾಕುವನೊಬ್ಬನೆ
ಕಾಕುಗೊಂಡಿನ್ನು ಕಂಡವರಿಗೆ ಬೇಡಿದರೆ
ತಾ ಕೊಡುವರೆಲ್ಲಿಂದ ತಾ ಕಾಣದವರೆಲ್ಲ
ಸಾಕುವನೊಬ್ಬನೆ ಸಕಲ ಜೀವರುಗಳ
ನೀ ಕೇಳು ಮನವೆ ನಿನ್ವ್ಯಾಕುಲವನು ಬಿಡು
ಏಕ ಚಿತ್ತದಲಿನ್ನು ಏಕೋದೇವನ ಭಜಿಸು
ಸಾಕಲ್ಯ ಗುಣಪೂರ್ಣ ಗೋಪಾಲವಿಠಲ
ಲೋಕದಿಂದಲಿ ಭಿನ್ನ ಲೋಕರ ಪಾಲಕ
ಅಟ್ಟ ತಾಳ
ತ್ರಿವಿಧ ಜೀವರು ಉಂಟು ತ್ರಿವಿಧ ಕರ್ಮಗಳುಂಟು
ತ್ರಿವಿಧಗುಣಗಳುಂಟು ತ್ರಿವಿಧಕಾರ್ಯಗಳುಂಟು
ತ್ರಿವಿಧರೊಳೊಂದೊಂದು ತ್ರಿವಿಧ ಬಗೆಯೆ ಉಂಟು
ತ್ರಿವಿಧ ಜೀವರ ಕಾರ್ಯ ಶ್ರೀಹರಿ ಅಧೀನ
ತ್ರಿವಿಧರಿಂದಲಿ ಭಿನ್ನ ತ್ರಿವಿಧರ ಪಾಲಕ
ತ್ರಿಕ್ರಮ ಮೂರ್ತಿ ಗೋಪಾಲವಿಠಲನ್ನ
ತಿಳಿದು ಸಾಕಲ್ಯದಿ ತಿಳಿಯಲು ವಶವಲ್ಲ
ಆದಿ ತಾಳ
ಈತನೆ ನಮ್ಮ ದೇವ ಈತನೆ ನಮ್ಮ ಕಾವ
ಈತನೆ ನಮ್ಮ ತಂದೆ ಈತನೆ ನಮ್ಮ ತಾಯಿ
ಈತನೆ ನಮ್ಮ ಬಂಧು ಈತನೆ ನಮ್ಮ ಬಳಗ
ಈತನೆ ಇಹ ನಮಗೀತನೆ ಪರವೊ
ಈತನೆ ದೇಶವು ಈತನೆ ದಿಕ್ಕಿನ್ನು
ಈತನೆ ಗತಿ ಇನ್ನೊಂದು ದೈವವಿಲ್ಲ
ವಾತಜಾತನಪಿತ ಗೋಪಾಲವಿಠಲ
ಸೋತೆನೆಂದವರ ಬೆನ್ಹತ್ತಿ ಪಾಲಿಸುವನು
ಜತೆ
ಬಿಡೆನು ಬಿಡೆನು ಇನ್ನು ಮುಂದೆ ಇದೆ ದೈವ
ಪಿಡಿದೆ ಗೋಪಾಲವಿಠಲನ ಅಡಿಗಳ ಅನುದಿನ
ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು
No comments:
Post a Comment