Tuesday, July 11, 2017

ಅಹುದಾದರಹುದೆನ್ನಿ ಇಲ್ಲವಾದರಿಲ್ಲವೆನ್ನಿ (ರಾಗ - ಮುಖಾರಿ, ತಾಳ - ಝಂಪೆ)

ಅಹುದಾದರಹುದೆನ್ನಿ ಇಲ್ಲವಾದರಿಲ್ಲವೆನ್ನಿ  ||  ||
ಬಹುಜನರು ನೆರೆ ತಿಳಿದು ಪೇಳಿ ಮತ್ತಿದನು || . ||

ದೇವರಿಲ್ಲದ ಗುಡಿಯು ಪಾಳು ಬಿದ್ದಂಗಡಿಯು
ಭಾವವಿಲ್ಲದ ಭಕುತಿ ಅದು ಕುಹಕ ಯುಕುತಿ
ಹೇವವಿಲ್ಲದ ಹೆಣ್ಣು ಗಜುಗ ಬೆಳೆದಾ ಕಣ್ಣು
ಸೇವೆಯರಿಯದ ಧಣಿಯು ಕಲ್ಲಿನಾ ಖಣಿಯು ||  ||

ಧರ್ಮವಿಲ್ಲದ ಅರಸು ಮುರಿದ ಕಾಲಿನ ಹೊರಸು
ನಿರ್ಮಲಿಲ್ಲದ ಮನಸು ಅದು ಕಜ್ಜಿ ತಿನಿಸು
ಶರ್ಮವಿಲ್ಲದ ಗಂಡು ಕರಿಯ ಒನಕೆಯ ತುಂಡು
ಮರ್ಮವಿಲ್ಲದ ಮಾತು ಒಡಕು ಮಡಕೆಯ ತೂತು ||  ||

ಮಕ್ಕಳಿಲ್ಲದ ತಾಯಿ ಕೊಳೆತ ತೆಂಗಿನಕಾಯಿ
ಸೌಖ್ಯವಿಲ್ಲದ ಕೂಟ ಅದು ಕಾಳಕೂಟ
ಒಕ್ಕಲಿಲ್ಲದ ಊರು ಕೊಳೆತು ನಾರುವ ನೀರು
ಸೊಕ್ಕಿ ನಡೆಯುವ ಭೃತ್ಯ ಅವ ಕ್ರೂರಕೃತ್ಯ ||  ||

ಕಂಡು ಕರೆಯದ ನಂಟು ಮೊನೆಯು ಕೆಟ್ಟಿಹ ಕಂಟ
ಉಂಡು ನಗದಿಹ ಮೋರೆ ಅದು ಕಹಿಯ ಸೋರೆ
ದಂಡಿಗಂಜುವ ಬಂಟ ಒಡಕು ಹರವಿಯ ಕಂಠ
ಗಂಡಗಂಜದ ನಾರಿ ಅವಳೆ ಹೆಮ್ಮಾರಿ ||  ||

ಬಿಟ್ಟು ನಡೆಯುವ ಗೆಣೆಯು ಹರಕು ತೊಗಲಿನ ಮಿಣೆಯು
ಕೊಟ್ಟು ಕೇಳುವ ದಾತ ಅವ ಹೀನ ಜಾತ
ಸೃಷ್ಟಿಯೊಳು ಕಾಗಿನೆಲೆಯಾದಿ ಕೇಶವನಂಘ್ರಿ
ಮುಟ್ಟಿ ಭಜಿಸಿದ ನರನು ಅವ ಕಾಡುಮರನು ||  ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

No comments:

Post a Comment