Tuesday, July 11, 2017

ಆನೆ ಬರುತಾದೆ ನೋಡಮ್ಮ ಮದ್ದಾನೆ ಬರುತಾದೆ ( ರಾಗ - ನಾದನಾಮಕ್ರಿಯೆ, ತಾಳ - ಆದಿ )

ಆನೆ ಬರುತಾದೆ ನೋಡಮ್ಮ ಮದ್ದಾನೆ ಬರುತಾದೆ  ||  ||

ಆನೆ ಬರುತಾದೆ ಎಲ್ಲರು ನೋಡಿರಿ ಒಂ
ದಾನೆಯ ಕೊಂದ ಮದ್ದಾನೆ 
ಏನೆಂದು ಪೇಳಲಿ ಎಲ್ಲ ದಿಕ್ಕುಗಳಲಿ
ತಾನೇ ತಾನಾಗಿ ಮದ ಸೊಕ್ಕಿದಾನೆ || . ||

ನೀರ ಮುಳುಗಿ ಖಳನ ಕೊಂದು ವೇದ ತಂದು
ಬರಮದೇವಗಿತ್ತ ಮದ್ದಾನೆ
ಕ್ರೂರ ಚಿತ್ರಗುಪ್ತನೊಡನೆ ಕಾರುಬಾರಿಗಿಳಿದ
ಜಾರ ಕೃಷ್ಣನೆಂಬ ಸೊಕ್ಕಿದಾನೆ ||  ||

ದಶದಿಕ್ಕಿನೊಳು ಘಂಟೆ ಘಣಿರೆಂದು ಬರುತಿದೆ
ಕುಸುಮಶರನ ಪೆತ್ತ ಮದ್ದಾನೆ
ದಶಕಂಠನ ಕೊಂದು ಅನುಜಗೆ ಪಟ್ಟಗಟ್ಟಿದ
ದಶರಥಸುತನೆಂಬ ಮದ ಸೊಕ್ಕಿದಾನೆ ||  ||

ಗಂಧ ಕಸ್ತೂರಿ ಬೊಟ್ಟು ಗಮಕದಿಂದಲಿ ಇಟ್ಟು
ಗೊಂದಲಗಡಿಬಿಡಿ ಸುರಲೋಕ ಅಮ್ಮಮ್ಮ
ಬೆಂಬಿಡದೆ ದೈತ್ಯರನು ಕೊಂದ ಗುಣಸಂಪನ್ನ
ಸುಂದರ ಕೃಷ್ಣನೆಂಬ ಮದ ಸೊಕ್ಕಿದಾನೆ ||  ||

ಸಾವಿರ ತೋಳವನ ಸರಸದಿಂದಲಿ ಕಡಿದ
ಭುವನ ರಕ್ಷಕನಾದ ಮದ್ದಾನೆ
ಯೌವನದ ಗೋಪೀಯರ ಕಣ್ಮಣಿ ಎನಿಪ ವಸು
ದೇವಸುತನೆಂಬ ಮದ ಸೊಕ್ಕಿದಾನೆ ||  ||

ಗರುಡವಾಹಾನವೇರಿ ಧಿಮಕೆಂದು ಬರುತಾನೆ
ಸರುವ ಲೋಕರಕ್ಷಕನೆಂಬ ಮದ್ದಾನೆ
ಉರೆ ಪೂತನಿಯ ಹೀರಿ ಮಾವ ಕಂಸನ ಕೊಂದ
ಸಿರಿಯಾದಿಕೇಶವನೆಂಬ ಮದ ಸೊಕ್ಕಿದಾನೆ ||  ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

No comments:

Post a Comment